ಉಡುಪಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಉಡುಪಿಯ ಮಲ್ಪೆ ಸಮೀಪದ ಬನ್ನಂಜೆಯ ನಿವಾಸಿ ವಿಲಾಸಿನಿ ಶೆಟ್ಟಿಗಾರ್ ಕಳೆದ ತಿಂಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಇಂದು ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸುಲು ಕುಟುಂಬಸ್ಥರು ಮುಂದಾಗಿದ್ದರಾದರೂ ಅಷ್ಟರಲ್ಲಿಯೇ ವಿಲಾಸಿನಿ ಪ್ರಾಣ ಬಿಟ್ಟಿದ್ದರು.
ವಿಲಾಸಿನಿ ಮೃತದೇಹವನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಾಳೆ ಬನ್ನಂಜೆ ರಾಜಾನನ್ನು ಕರೆತರುವ ಬಗ್ಗೆ ವಕೀಲರ ಜೊತೆ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಅಂತ್ಯಕ್ರಿಯೆಯು ಕುಟುಂಬದ ಸದಸ್ಯರ ನಿರ್ಧಾರದ ಬಳಿಕವೇ ನಡೆಯಲಿದೆ. ಬನ್ನಂಜೆ ರಾಜನ ವಿರುದ್ಧ 45ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಈಗ ಆತನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ಜುಲೈ ತಿಂಗಳಿನಲ್ಲಿ ತನ್ನ ತಾಯಿಯ ಆರೋಗ್ಯ ವಿಚಾರಿಸಲು ಬನ್ನಂಜೆ ರಾಜಾ ಪೆರೋಲ್ ಮೇಲೆ ಬಂದಿದ್ದ.