ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜ ತಾಯಿಯ ಆರೋಗ್ಯ ವಿಚಾರಿಸಲು ಉಡುಪಿಗೆ ಆಗಮಿಸಿದ್ದಾನೆ.
ವಿಚಾರಣಾಧೀನ ಖೈದಿಯಾಗಿರುವ ಬನ್ನಂಜೆ ರಾಜ ಬೆಳಗಾವಿಯ ಹಿಂಡೆಲಗ ಜೈಲಿನಲ್ಲಿದ್ದಾನೆ. ಜೈಲಿನಲ್ಲಿರುವ ಬನ್ನಂಜೆ ರಾಜನಿಗೆ ನ್ಯಾಯಾಲಯ ಮಾನವೀಯ ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ಅವಕಾಶ ನೀಡಿದೆ. ಇದನ್ನೂ ಓದಿ: ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ
ಪೊಲೀಸ್ ಬಿಗಿ ಭದ್ರತೆಯಲ್ಲಿ ಉಡುಪಿಗೆ ಆಗಮಿಸಿದ ಬನ್ನಂಜೆ ರಾಜನನ್ನು ನಗರ ಠಾಣೆಗೆ ಕರೆದೊಯ್ಯಲಾಯ್ತು. ಭಾನುವಾರ ರಾತ್ರಿ ಬನ್ನಂಜೆ ರಾಜ ಉಡುಪಿ ನಗರ ಪೊಲೀಸ್ ಠಾಣೆಯಲ್ಲೇ ಇದ್ದು, ಇಂದು ಉಡುಪಿಯ ಮಲ್ಪೆ ಸಮೀಪವಿರುವ ಕಲ್ಮಾಡಿಯಲ್ಲಿರುವ ಮನೆಗೆ ತೆರಳಲಿದ್ದಾನೆ.
ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಈತನ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶೂಟೌಟ್, ದರೋಡೆ, ಕೊಲೆ ಪ್ರಕರಣ ಸಹಿತ 16 ಕ್ರಿಮಿನಲ್ ಪ್ರಕರಣಗಳು ಹೀಗೆ ಒಟ್ಟು 45ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.