ಚಿಕ್ಕಬಳ್ಳಾಪುರ: ದನದ ವ್ಯಾಪಾರಿಗಳ ಕಾರು ಅಡ್ಡಗಟ್ಟಿದ ಖದೀಮರು, ಚಾಕುವಿನಿಂದ ಬೆದರಿಸಿ ಹಲ್ಲೆ ಮಾಡಿ ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಹಾರೋಬಂಡೆ ಬಳಿ ನಡೆದಿದೆ.
ಬೆಂಗಳೂರು ಮೂಲದ ಸಾಧಿಕ್, ಫಕ್ರುದ್ದೀನ್ ಬಾಬಾ, ಮುಷರಫ್ ಹಾಗೂ ಅರಣ್ ಎಂಬುವವರು ಟವೇರಾ ಬಾಡಿಗೆ ಕಾರಿನ ಮುಖಾಂತರ ಚಾಲಕ ವಿಜಯ್ ಕುಮಾರ್ ಎಂಬಾತನ ಜೊತೆ ಆಂಧ್ರದ ಅನಂತಪುರಕ್ಕೆ ದನಗಳ ವ್ಯಾಪಾರಕ್ಕೆ ಅಂತ ತೆರಳುತ್ತಿದ್ರು. ಆದ್ರೆ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಹಾರೋಬಂಡೆ ಬಳಿ ಏಕಾಏಕಿ ಬಂದ ಮಹೀಂದ್ರಾ ಕ್ಸೈಲೋ ಕಾರಿನಲ್ಲಿ ಬಂದ 5 ಮಂದಿ ಖದೀಮರು ಟವೇರಾ ಕಾರನ್ನು ಅಡ್ಡ ಹಾಕಿದ್ದಾರೆ.
ಕಾರಿನಲ್ಲಿದ್ದವರಿಗೆ ಚಾಕುವಿನಿಂದ ಬೆದರಿಸಿ ಅವರ ಬಳಿ ಇದ್ದ 3 ಲಕ್ಷದ 10 ಸಾವಿರ ಹಣ ಹಾಗೂ ಮೂರು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಇನ್ನೂ ಘಟನೆಯಲ್ಲಿ ಸಾಧಿಕ್ ಎಂಬಾತನ ಹೊಟ್ಟೆಗೆ ಚಾಕು ಇರಿತವಾಗಿದ್ದು ಚಿಕಿತ್ಸೆಗೆ ಅಂತ ಬೆಂಗಳೂರಿನ ಹಾಸ್ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸ್ಥಳ ತನಿಖೆ ನಡೆಸಿರುವ ಪೊಲೀಸರು ಟವೇರಾ ಕಾರು ಚಾಲಕ ವಿಜಯ್ ಕುಮಾರ್ ಮೇಲೆಯೇ ಶಂಕೆ ವ್ಯಕ್ತಪಡಿಸಿ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ವಿಜಯ್ ಕುಮಾರ್ ಘಟನೆ ನಡೆದ ಹಾರೋಬಂಡೆಯ ಪಕ್ಕದ ಗ್ರಾಮ ಗುಂಡ್ಲುಗುರ್ಕಿಯವನಾಗಿದ್ದು, ಚಾಲಕನೇ ಸಂಚು ರೂಪಿಸಿ ಈ ಪ್ಲಾನ್ ಮಾಡಿದ್ದನಾ ಎನ್ನುವ ಅನುಮಾನ ಕಾಡತೊಡಗಿದ್ದು, ವಿಜಯ್ ಕುಮಾರ್ ವಿಚಾರಣೆ ಮುಂದುವರಿದಿದೆ.