ಹುಬ್ಬಳ್ಳಿ: ದೇವಸ್ಥಾನದ ಆಭರಣಗಳ ಮೇಲೆ ಕಣ್ಣು ಹಾಕಿದ್ದ ದುಷ್ಕರ್ಮಿಗಳ ತಂಡ ಮನೆಯಿಂದ ದೇವಸ್ಥಾನಕ್ಕೆ ಸುರಂಗ ಮಾರ್ಗ ತೆಗೆಯುತ್ತಿದ್ದ ಘಟನೆ ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.
ನಗರದ ಹುಲಿಗೆಮ್ಮ ದೇವಸ್ಥಾನದಲ್ಲಿ ದೇವಿಗೆ ಅಲಂಕಾರ ಮಾಡಿರುವ ಆಭರಣಗಳನ್ನು ಕಳ್ಳತನ ಮಾಡಲು ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಬಸವರಾಜ ಮಾಸನಗಿ ಸ್ವಾಮೀಜಿ ಕೃತ್ಯ ಎಸಗಿದ್ದಾನೆ.
Advertisement
Advertisement
ಸಿಕ್ಕಿಬಿದ್ದಿದ್ದು ಹೇಗೆ:
ದೇವಾಲಯ ಇರುವ ಕರ್ಕಿ ಬಸವೇಶ್ವರ ನಿವಾಸಿಯಾದ ಮಾರುತಿ ಉಮಚಗಿ ಎಂಬಾತನೊಂದಿಗೆ ಸೇರಿ ಬಸವರಾಜ ದೇವಸ್ಥಾನಕ್ಕೆ ಕನ್ನ ಹಾಕಲು ಯತ್ನಿಸಿದ್ದು, ಇದಕ್ಕಾಗಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮಾರುತಿ ಉಮಚಗಿ ಮನೆಯಲ್ಲಿ ಕಳೆದ ವಾರ ಪೂಜೆ ಪುರಸ್ಕಾರ ಮಾಡಿ ಶನಿವಾರ ರಾತ್ರಿ ಸುರಂಗ ಮಾರ್ಗ ತೆಗೆಯುವ ಕೆಲಸ ಆರಂಭಿಸಿದ್ದಾನೆ. ಆದರೆ ಸುರಂಗ ಮಾರ್ಗ ತೆಗೆಯುವಾಗ ಮನೆಯಿಂದ ಶಬ್ಧ ಕೇಳಿ ಬಂದಿದ್ದು, ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಹುಲಗೆಮ್ಮ ದೇವಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಜ್ರದ ನತ್ತು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ನೀಡಲಾಗಿದ್ದು, ಮನೆಯಿಂದ ಸುರಂಗ ಮಾರ್ಗ ತೆಗೆದು ನೇರವಾಗಿ ದೇವಸ್ಥಾನದ ಗರ್ಭಗುಡಿಗೆ ಸಂಪರ್ಕ ಕಲ್ಪಿಸಲು ಆರೋಪಿಗಳು ಯತ್ನಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಬೆಂಡಿಗೇರಿ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ಭಾಗಿಯಾಗಿದ್ದ ರಾಜು ಜೋಳದ, ಮಲೇಶಪ್ಪ ಹರಿಜನ, ಶ್ರೀಕಾಂತ್ ಹುಟ್ಟನ್ನವರ, ಮದನಗೌಡ ಮದಿಗೌಡರ, ಯಲ್ಲಪ್ಪ ಹಳಗಟ್ಟಿ ಹಾಗೂ ಮನೆ ಮಾಲೀಕ ಮಾರುತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಂದಹಾಗೇ ದೇವಿಯ ಆಭರಣ ಕಳ್ಳತನ ಮಾಡಲು ಆರೋಪಿ ಬಸವರಾಜ ಸ್ವಾಮೀಜಿ, ಮಾರುತಿ ಉಮಚಗಿಯಿಂದ 21 ಸಾವಿರ ರೂ. ಹಣ ಪಡೆದು ಪೂಜೆ ಸಲ್ಲಿಸಿದ್ದಾನೆ. ಬಳಿಕ ತನ್ನ ಶಿಷ್ಯರ ಮೂಲಕ ದೇವಿಯ ಆಭರಣ ಕಳ್ಳತನ ಮಾಡಲು ಸುರಂಗ ತೆಗೆಯಲು ಮುಂದಾಗಿದ್ದ ಎಂಬ ಮಾಹಿತಿ ಲಭಿಸಿದೆ.
Advertisement
ಬಂಧಿತರೆಲ್ಲರು ಹಾವೇರಿ ಮೂಲದವರಾಗಿದ್ದು, ಸದ್ಯ ಕೃತ್ಯಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ಬಸವರಾಜ ಸ್ವಾಮೀಜಿ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನು ಮನೆ ಮೇಲೆ ದಾಳಿ ನಡೆಸಿದ ವೇಳೆ ಕೃತ್ಯಕ್ಕೆ ಬಳಕೆ ಮಾಡಿದ್ದ ಲೋಹ ಶೋಧಕ ಯಂತ್ರ ಸೇರಿದಂತೆ ಸುರಂಗ ನಿರ್ಮಿಸಿಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv