ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜತೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ತಮ್ಮ ನಿವೃತ್ತಿಯ ಘೋಷಣೆ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಗಂಭೀರ್, ನನ್ನ ಮತ್ತು ಧೋನಿಯ ನಡುವೆ ಭಿನ್ನಾಭಿಪ್ರಾಯಗಳಿರಬಹುದೇ ಹೊರತು ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಯಾವುದೇ ಆಟಗಾರನಿಗೆ ವಿದಾಯದ ಪಂದ್ಯ ನಡೆಸಬೇಕೆಂದು ಇಲ್ಲ ಎಂದು ತಮ್ಮ ಅಂತಿಮ ಪಂದ್ಯವಾದ ಆಂಧ್ರಪ್ರದೇಶದ ವಿರುದ್ಧದ ರಣಜಿ ಕುರಿತ ಪ್ರಶ್ನೆಗೆ ಉತ್ತರಿಸಿದರು.
Advertisement
Advertisement
ಇದೇ ವೇಳೆ 2015ರ ವಿಶ್ವಕಪ್ ಟೂರ್ನಿಯಲ್ಲಿ ತಮಗೇ ಅವಕಾಶ ನೀಡದ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ನನ್ನೊಂದಿಗೆ ಆಡಿದ ಎಲ್ಲಾ ಆಟಗಾರರಿಗೂ 2 ರಿಂದ ಮೂರು ವಿಶ್ವಕಪ್ ಆಡಿದ್ದಾರೆ. ಆದರೆ ನಾನು ಮಾತ್ರ ಆ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾನು ಆಡಿದ ವಿಶ್ವಕಪ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಬಗ್ಗೆ ನನಗೆ ತೃಪ್ತಿ ಇದೆ. ಯಾವುದೇ ಒಬ್ಬ ಆಟಗಾರ ತಂಡದ ಕೀ ಪ್ಲೇಯರ್ ಆಗಿರುವ ವೇಳೆ ಆತನಿಗೆ ಅವಕಾಶ ನೀಡಬೇಕು. ಆದರೆ 2015 ರಲ್ಲಿ ನನಗೆ ಅವಕಾಶ ನೀಡದಿರುವುದು ಬೇಸರದ ವಿಚಾರ ಎಂದರು.
Advertisement
2011ರ ವಿಶ್ವಕಪ್ ಫೈನಲ್ ಗೆದ್ದ ಪಂದ್ಯದ ಹೀರೋ ಆಗಿದ್ದ ಗಂಭೀರ್, ಬಳಿಕ ನಡೆದ ಬೆಳವಣಿಗೆಗೆಗಳಲ್ಲಿ 2015ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈ ವೇಳೆ ಗಂಭೀರ್ ಅವಕಾಶ ವಂಚಿತರಾಗಲು ತಂಡದ ನಾಯಕತ್ವ ವಹಿಸಿದ್ದ ಧೋನಿ ಕಾರಣ ಎಂಬ ಆರೋಪ ಮಾಡಲಾಗಿತ್ತು. ಉಳಿದಂತೆ ದೆಹಲಿ ಹಾಗು ಆಂಧ್ರಪ್ರದೇಶ ನಡುವಿನ ರಣಜಿ ಪಂದ್ಯ ಗಂಭೀರ್ ಅವರ ವೃತ್ತಿ ಜೀವನದ ಅಂತಿಮ ಪಂದ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಗಂಭೀರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಇದನ್ನು ಓದಿ : ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ
Advertisement
37 ವರ್ಷದ ಗೌತಮ್ ಗಂಭೀರ್ 2003ರ ಏಪ್ರಿಲ್ 11ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ 149ನೇ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 2004ರ ನವೆಂಬರ್ 3ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ 249ನೇ ಆಟಗಾರನಾಗಿ ಆಡಿದ್ದರು. ಗೌತಮ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. ಕೊನೆಯದಾಗಿ 2013ರ ಜನವರಿ 27ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಟೆಸ್ಟ್ ನಲ್ಲಿ 58 ಪಂದ್ಯಗಳನ್ನು ಆಡಿರುವ ಗಂಭೀರ್, 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಟೆಸ್ಟ್ ನಲ್ಲಿ ಗರಿಷ್ಠ 206 ಹೊಡೆದಿದ್ದಾರೆ. ಅಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿ 27.41ರ ಸರಾಸರಿಯಲ್ಲಿ 932 ರನ್ ಗಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv