ಬೆಂಗಳೂರು: ನಗರದ ಪ್ರತಿಷ್ಟಿತ ಗಾಳಿ ಆಂಜನೇಯ ದೇಗುಲವನ್ನು ಮುಜುರಾಯಿ ಇಲಾಖೆ (Muzurai Department) ಸುಪರ್ದಿಗೆ ತೆಗೆದುಕೊಂಡ ನಂತರ ದೇವಸ್ಥಾನದ ಆಡಳಿತ ಮಂಡಳಿ ಸಿಡಿದೆದ್ದಿದೆ. ಈ ಬೆನ್ನಲ್ಲೇ ಇದು ತಾತ್ಕಾಲಿಕ, 5 ವರ್ಷದ ನಂತರ ದೇಗುಲವನ್ನು ಟ್ರಸ್ಟ್‌ಗೆ ವಾಪಸ್ ಕೊಡುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಹಣ ದುರುಪಯೋಗ ಆಗಿದೆ. ಹೀಗಾಗಿ ಈ ಕ್ರಮ ಆಗಿದೆ. ಇದು ತಾತ್ಕಲಿಕ ಅಷ್ಟೇ. 5 ವರ್ಷದ ಬಳಿಕ ದೇಗುಲವನ್ನು ಮಂಡಳಿಗೆ ವಾಪಸ್ ಕೊಡುತ್ತೇವೆ. ಮುಜರಾಯಿ ಇಲಾಖೆ ಸಲ್ಲಿಸಿದ ವರದಿಯಲ್ಲಿ ಹಣಕಾಸಿನ ಲೆಕ್ಕವಿಲ್ಲ. ಯಾವುದೇ ದೇವಸ್ಥಾನದಲ್ಲಿ ಹಣಕಾಸಿನ ದುರುಪಯೋಗ ಆದರೆ ಅದನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಸುಮಾರು 10 ದೇವಾಲಯಗಳನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಹೇಳಿದರು.ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ
ಗುರುವಾರ ಮುಜರಾಯಿ ಇಲಾಖೆಯು ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು ತನ್ನ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿತ್ತು. ಕಳೆದ ವರ್ಷ ದೇವಸ್ಥಾನದ ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು.
ಇದೀಗ ಮುಜರಾಯಿ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸು ಮಾಡಿತ್ತು. ಇದನ್ನು ಒಪ್ಪಿದ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಅಂತ ಘೋಷಣೆ ಮಾಡಿತ್ತು. ಈ ಆದೇಶದ ಬೆನ್ನಲ್ಲೇ ದೇವಸ್ಥಾನದ ಟ್ರಸ್ಟಿಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು.
ದೇವಸ್ಥಾನವನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಂಡಿದ್ದು ಸರಿಯಲ್ಲ ಎಂದು ಹೇಳಿ ದೇವಸ್ಥಾನದ ಆಡಳಿತ ಮಂಡಳಿ 12 ಗಂಟೆಗೆ ತುರ್ತು ಸಭೆ ಕರೆದಿತ್ತು. ಸಭೆ ಬಳಿಕ ನಾವು ಕಾನೂನು ಹೋರಾಟ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.ಇದನ್ನೂ ಓದಿ: ಟೆನ್ನಿಸ್ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್ – ಮ್ಯೂಸಿಕ್ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?