ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2019ಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತದೆ. ಇಂದು ಬೆಳ್ಳಂಬೆಳಗ್ಗೆಯೇ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆ ತಾಲೀಮು ಆರಂಭಿಸಿದೆ.
ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿ ಎಲ್ಲ ಆರು ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿವೆ. ಸದ್ಯ ಆನೆಗಳು ಬರಿ ಮೈ ನಡಿಗೆ ತಾಲೀಮು ಆರಂಭಿಸಿದ್ದು, ಜಂಬೂ ಸವಾರಿಗಾಗಿ ಗಜಪಡೆಗೆ ತರಬೇತಿ ನೀಡಲಾಗುತ್ತಿದೆ. ಮೈಸೂರು ಅರಮನೆಯಿಂದ ಗಜಪಡೆ ತಾಲೀಮು ಆರಂಭಿಸಿದ್ದು, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸಾಗಿ ಬಳಿಕ ಅರಮನೆ ಸೇರಲಿದೆ.
Advertisement
Advertisement
ಮಂಗಳವಾರ ನಗರದ ದೇವರಾಜ ಮೊಹಲ್ಲಾದ ಸಾಯಿರಾಮ್ & ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನ- 5,800 ಕೆ.ಜಿ ಇದ್ದರೆ, ವರಲಕ್ಷ್ಮಿ- 3,510 ಕೆ.ಜಿ, ಈಶ್ವರ- 3,995 ಕೆ.ಜಿ, ಧನಂಜಯ- 4,460 ಕೆ.ಜಿ, ವಿಜಯ- 2,825 ಕೆ.ಜಿ ಹಾಗೂ ಅಭಿಮನ್ಯು- 5,145 ಕೆ.ಜಿ ಇದೆ.
Advertisement
ಸೋಮವಾರ ಮೈಸೂರು ಅರಮನೆಗೆ ಮೊದಲ ತಂಡದ ಆರು ಆನೆಗಳು ಆಗಮಿಸಿದ್ದವು. ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆದಿತ್ತು. ಇನ್ನೂ ಒಂದೂವರೆ ತಿಂಗಳ ಕಾಲ ಆನೆಗಳು ಅರಮನೆಯಲ್ಲೇ ಉಳಿಯಲಿದೆ.