ಬೆಂಗಳೂರು: ಭೂಮಿಯಡಿಯಲ್ಲಿ ಅಳವಡಿಸಿರುವ ಗೇಲ್ ಗ್ಯಾಸ್ ಕಂಪನಿಯ ಪೈಪ್ ಲೈನ್ ಸೋರಿಕೆಯಾಗಿ ಪದೇ ಪದೆ ಅವಘಡಗಳು ಸಂಭವಿಸುತ್ತಿದ್ದು, ಇದೀಗ ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ.
ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರೋಡ್ ಬಳಿ ಘಟನೆ ನಡೆದಿದ್ದು, ಅಂಗವಿಕಲ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಗಾಯಗೊಂಡ ಮಹಿಳೆಯನ್ನು ಸಂಧ್ಯಾರಾಣಿ ಎಂದು ಗುರುತಿಸಲಾಗಿದೆ. ಮೊದಲೇ ಅಂಗವಿಕಲೆಯಾಗಿರುವ ಸಂಧ್ಯಾರಾಣಿಯವರಿಗೆ, ಇದೀಗ ಮತ್ತೊಂದು ಕಾಲು ಸಹ ಊನವಾಗಿದೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಪರಪ್ಪನ ಅಗ್ರಹಾರ ಎಚ್.ಎಸ್.ಆರ್. ಬಡಾವಣೆ ಸುತ್ತ ಮನೆಗಳಲಿಗೆ ಪೈಪ್ ಮೂಲಕ ಗ್ಯಾಸ್ ಸರಬರಾಜು ಮಾಡಲು ಗೇಲ್ ಕಂಪನಿ ನೆಲದಾಳದಲ್ಲಿ ಪೈಪ್ ಅಳವಡಿಸಿದೆ. ಭೂಮಿ ಅಗೆಯುವ ವೇಳೆ ಹಲವು ಬಾರಿ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿವೆ. ಇಂದು ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಮತ್ತೊಂದು ಅವಘಡ ಸಂಭವಿಸಿದೆ.
Advertisement
ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಗ್ಯಾಸ್ ಸೋರಿಕೆಯಾಗಿ ನಾಲ್ಕು ಮನೆಗಳು ಜಖಂ ಆಗಿದ್ದವು. ಅಲ್ಲದೆ ಐದಾರು ಮಂದಿ ಗಂಭೀರ ಗಾಯಗೊಂಡಿದ್ದರು. ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷವಹಿಸಿರುವುದು ಪದೇ ಪದೆ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.