ಕಾಲು ಜಾರಿ ರೈಲಿನಡಿ ಸಿಲುಕಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ

Public TV
2 Min Read
GDG Yodha

ಗದಗ: ಕರ್ತವ್ಯಕ್ಕೆ ತೆರಳುವ ವೇಳೆ ರೈಲಿನಡಿ ಸಿಲುಕಿ ಸಾವನ್ನಪ್ಪಿ ಯೋಧರೊಬ್ಬರ ಅಂತ್ಯಕ್ರಿಯೆ ಇಂದು ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನೆರವೇರಿತು.

ಮುಳಗುಂದ ಪಟ್ಟಣದಲ್ಲಿ ನಿವಾಸಿ ಬಸವರಾಜ್ ಹಿರೇಮಠ ಮೃತ ಯೋಧ. ಬಸವರಾಜ್ ಅವರು ರಜೆಗೆಂದು 15 ದಿನಗಳ ಕಾಲ ಊರಿಗೆ ಬಂದಿದ್ದರು. ಎರಡು ದಿನಗಳ ಹಿಂದೆಯಷ್ಟೇ ಮರಳಿ ಕರ್ತವ್ಯಕ್ಕೆ ಹಾಜರಾಗಲು ಮಹಾರಾಷ್ಟ್ರದ ಪುಣೆಗೆ ತೆರಳಿದ್ದರು. ಈ ವೇಳೆ ಪುಣೆಯಲ್ಲಿ ರೈಲು ಇಳಿಯುವ ವೇಳೆ ಕಾಲು ಜಾರಿ ರೈಲಿನಲ್ಲಿ ಸಿಲುಕಿ ಸಾವನ್ನಪ್ಪಿದ್ದರು.

GDG Soldier 1

ಮೃತ ಯೋಧ ಬಸವರಾಜ್ ಅವರು 2005ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಸದ್ಯ ಅವರು ಪುಣೆ ಸೇನಾ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿರುವಾಗ ದುರ್ಘಟನೆ ನಡೆದಿದೆ. ಮೃತ ಬಸವರಾಜ್ ನಿವೃತ್ತಿಯಾಗಲು ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಪ್ರತಿಬಾರಿ ಕರ್ತವ್ಯಕ್ಕೆ ತೆರಳುವ ವೇಳೆ ಮನೆಯವರಿಗೆಲ್ಲರಿಗೂ ಹೋಗಿ ಬರುತ್ತೇನೆ ಅಂತ ಹೇಳಿ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗುತ್ತೇನೆ ಅಂತ ಹೇಳಿ ಹೋದವರು ಮತ್ತೆ ಬರುವಾಗ ಶವವಾಗಿ ಬಂದಿದ್ದಾರೆ ಎಂದು ಬಸವರಾಜ್ ಅವರ ತಾಯಿ ಅನ್ನಪೂರ್ಣ ಕಣ್ಣೀರಿಟ್ಟಿದ್ದಾರೆ.

ಮುಳಗುಂದ ಪಟ್ಟಣಕ್ಕೆ ಯೋಧ ಬಸವರಾಜ್ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಇಡೀ ಊರಿನ ಜನರ ಶೋಕ ಸಾಗರದಲ್ಲಿ ಮುಳುಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿ, ನಂತರ ಶಾಲಾ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು.

GDG Yodha A

ಬಸವರಾಜ್ ಅವರು ಪತ್ನಿ ಸಾವಿತ್ರಿ ಅವರನ್ನು ರಾಜ್ಯದ ಉನ್ನತ ಹುದ್ದೆಗೆ ಸೇರಿಸಬೇಕು. ಅವರು ನಾಡಿನ ಸೇವೆಯನ್ನು ಮಾಡಬೇಕು ಎಂದು ಅವರನ್ನು ಸ್ಪರ್ಧಾತ್ಮ ಪರೀಕ್ಷೆಗೆ ಸಿದ್ಧಪಡಿಸಿದ್ದರು. ಆದರೆ ಈಗ ಎಲ್ಲವೂ ನಿಮ್ಮ ಜೊತೆ ಹೋಯುತಲ್ಲ ಅಂತ ಪತ್ನಿ ಕಣ್ಣೀರಾದರು. ಬಸವರಾಜ್ ಅವರು ದೇಶಸೇವೆ ನಿವೃತ್ತಿ ಬಳಿಕ ಕೃಷಿಕನಾಗಿ ಭೂತಾಯಿ ಸೇವೆ ಮಾಡುವುದಾಗಿ ಹೇಳಿದ್ದರು. ಕುಟುಂಬದ ಬಗ್ಗೆ ಹತ್ತು ಹಲವು ಕನಸುಗಳನ್ನು ಕಂಡಿದ್ದ ಎಂದು ತಂದೆ ಶಂಕ್ರಯ್ಯ ಹೇಳಿದ್ದಾರೆ.

ಯೋಧ ಬಸವರಾಜ್ ಅವರ ಅಂತಿಮ ದರ್ಶನಕ್ಕೆ ಶಾಸಕ ಎಚ್.ಕೆ.ಪಾಟೀಲ್, ಎಸಿ ರಾಯಪ್ಪ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು. ಬಳಿಕ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *