ಗದಗ: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿನ ಸಂಜೀವಿನಿ ಎಂದೇ ಹೇಳುತ್ತಾರೆ. ಆದರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಆಗರವಾಗಿದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಬೇಸತ್ತು ರೋಗಿಗಳು ಕಣ್ಣೀರು ಹಾಕುತ್ತಿದ್ದಾರೆ.
ಆಸ್ಪತ್ರೆಯ ಕಾರಿಡಾರಿನಲ್ಲೇ ರೋಗಿಗಳಿಗೆ ಡ್ರಿಪ್, ರಕ್ತ ಹಾಕುತ್ತಿರೋ ದೃಶ್ಯ ನೋಡಿದರೆ ಇದು ಆಸ್ಪತ್ರೆಯೋ ನರಕವೋ ಎನ್ನುವಂತಿದೆ. ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ ನಡೆಸುತ್ತಿದ್ದರೂ ವೈದ್ಯಾಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆ 100 ಬೆಡ್ ಇರೋ ಆಸ್ಪತ್ರೆ ಇದಾಗಿದ್ದರೂ ಇಲ್ಲಿ ಬರೋ ಬಡ ರೋಗಿಗಳು ಮಾತ್ರ ಪರದಾಡುತ್ತಿದ್ದಾರೆ. ವೃದ್ಧೆಯೊಬ್ಬರು ಅತಿಸಾರದಿಂದ ಬಳಲಿ ಆಸ್ಪತ್ರೆಗೆ ಬಂದರೆ ಕಾರಿಡಾರ್‍ನಲ್ಲೇ ಡ್ರಿಪ್ ಹಚ್ಚಿ ಅವರನ್ನು ಅಲ್ಲಿಯೇ ಬಿಟ್ಟಿದ್ದಾರೆ. ವಾರ್ಡ್ ಗೆ ಶಿಫ್ಟ್ ಮಾಡೋ ಗೋಜಿಗೇ ಹೋಗಿಲ್ಲ. ಇದಿಷ್ಟೇ ಅಲ್ಲ, ಇನ್ನೊಬ್ಬ ಮಹಿಳೆಗೆ ಹೊರಗಡೆಯೇ ರಕ್ತ ಹಾಕುತ್ತಿರೋ ದೃಶ್ಯ ಕೂಡ ಕಣ್ಣೀರು ತರುವಂತಿತ್ತು ಎಂದು ರೋಗಿಯೊಬ್ಬರ ಸಂಬಂಧಿ ಪ್ರಕಾಶ್ ಹೇಳಿದ್ದಾರೆ.
ಇಲ್ಲಿ ರೋಗಿಗಳು ಹನಿ ನೀರಿಗೂ ಪರದಾಡುವಂತಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಶುದ್ಧ ನೀರಿನ ಘಟಕ ಪಾಳು ಬಿದ್ದಿದೆ. ರೋಗಿಗಳನ್ನು ಮುಟ್ಟದೆ ಔಷಧಿ ಬರೆಯುವುದು ನೋಡಿದರೆ ಕಾಟಾಚಾರಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರಾದ ದಾವುದ್ ಖಾನ್ ಕಿಡಿಕಾರಿದ್ದಾರೆ.
ಲಕ್ಷ್ಮೇಶ್ವರದ ಈ ಆಸ್ಪತ್ರೆಗೆ 10 ಜನ ವೈದ್ಯರು ಬೇಕಿದೆ. ಆದರೆ ಒಬ್ಬರು ಎಂಬಿಬಿಎಸ್, ಇಬ್ಬರು ಆರ್ಯುವೇದಿಕ್ ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆ ಬಗ್ಗೆ ಡಿಎಚ್‍ಓ ಡಾ. ವೀರುಪಾಕ್ಷ ರೆಡ್ಡಿ ಅವರನ್ನು ಕೇಳಿದರೆ ಚೆಕ್ ಅಂದರೆ ಏನು ಮಾಡಬೇಕೆಂದು ನೀವು ಹೇಳೋದು, ರೋಗಿಗಳ ನಾಡಿಮಿಡಿತ, ನಾಲಗೆ ನೋಡಿದರೆ ಗೊತ್ತಾಗುತ್ತದೆ. ಅಲ್ಲದೆ ನಿಮಗೇನು ಗೊತ್ತಿದೆ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ.
ಒಟ್ಟಿನಲ್ಲಿ, ಖಾಸಗಿ ಆಸ್ಪತ್ರೆಗಳಿಗೆ ಯಾಕೆ ಹೋಗುತ್ತೀರಿ, ಸರ್ಕಾರಿ ಆಸ್ಪತ್ರೆಗೇ ಬನ್ನಿ ಎಂದು ಹೇಳುತ್ತಿರುವ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯ ಒದಗಿಸಬೇಕಿದೆ.