ಗದಗ: ವರ್ಷ ಬರುತ್ತಿದ್ದಂತೆ ಮುದ್ರಣ ಕಾಶಿಯಲ್ಲಿ ತಯಾರಾಗುವ ಕ್ಯಾಲೆಂಡರ್, ಮಿನಿಡೈರಿ ಹಾಗೂ ತೂಗು ಪಂಚಾಂಗಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದಲ್ಲೇ ಅತಿ ಹೆಚ್ಚು ಮುದ್ರಣಾಲಯಗಳನ್ನು ಹೊಂದಿದ ಮುದ್ರಣ ಕಾಶಿ (Mudrana Kashi) ಎಂದೇ ಹೆಗ್ಗಳಿಕೆ ಗದಗ ಜಿಲ್ಲೆ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಸುಮಾರು ನೂರಾರು ಮುದ್ರಣಾಲಯಗಳು ಹಾಗೂ ಪ್ರಕಾಶನಗಳಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಪ್ರಿಂಟಿಂಗ್ ಪ್ರೆಸ್‌ಗಳು (Printing Press) ಇಲ್ಲಿ ಸ್ಥಾಪನೆಯಾಗಿದ್ದವು. ಈ ಪರಂಪರೆ ಈಗಲೂ ಮುಂದುವರಿದಿದ್ದು ನೂರಾರು ಪ್ರಿಂಟಿಂಗ್ ಪ್ರೆಸ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಕೇಶ್ವರ ಪ್ರಿಂಟಿಂಗ್ ಪ್ರೆಸ್ (Sankeshwar Printing Press) ಮಾಲಿಕ ಬಿ.ಎಂ ಸಂಕೇಶ್ವರ್, ಕ್ಯಾಲೆಂಡರ್, ಮಿನಿಡೈರಿ, ತೂಗು ಪಂಚಾಂಗಗಳಿಗೆ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಹೊಸವರ್ಷ ಬರುವ ಮೂರು ತಿಂಗಳ ಮೊದಲೇ ಇಲ್ಲಿ ಕ್ಯಾಲೆಂಡರ್ ಹಾಗೂ ಪಂಚಾಂಗಗಳು ಪ್ರಿಂಟ್ ಆಗುತ್ತವೆ. ರಾಜ್ಯದ ನಾನಾ ಜಿಲ್ಲೆಗಳಿಗೆ ಅಷ್ಟೇ ಅಲ್ಲದೇ ದೇಶ ವಿದೇಶಿ ಕನ್ನಡಿಗರ ಮನೆಗಳಲ್ಲಿ ಗದಗ ಜಿಲ್ಲೆ ಕ್ಯಾಲೆಂಡರ್‌ಗಳು (Calendar) ಮನೆಮಾತಾಗಿವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್ ಸೇನಾ ಕಾರ್ಯಾಚರಣೆ – ಎರಡು ದಿನದಲ್ಲಿ 22 ಉಗ್ರರ ಹತ್ಯೆ, 6 ಯೋಧರ ಸಾವು
Advertisement
Advertisement
ದಿನಾಂಕ, ತಿಥಿ, ನಕ್ಷತ್ರ, ವಾರ, ರಾಶಿ ಭವಿಷ್ಯ, ಗ್ರಹಣ, ಶುಭ, ಅಶುಭ ಫಲಗಳು, ಮಳೆ, ಜಾತ್ರೆ, ಉತ್ಸವಗಳು, ಜಯಂತಿಗಳು ಸೇರಿದಂತೆ ಇತರೇ ದಿನಚರಿಗಳ ಬಗ್ಗೆ ಅನುಭವಿ ಜೋತಿಷ್ಯರಿಂದ ಮಾಹಿತಿ ಪಡೆದು ಪ್ರಿಂಟ್ ಮಾಡಿಸುತ್ತಾರೆ. ಗದಗ ನಗರದಲ್ಲಿ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದು ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಮಾತ್ರ. ಸಾವಿರಾರು ಕುಟುಂಬಗಳು ಇಲ್ಲಿಯ ಪ್ರಿಂಟಿಂಗ್ ಪ್ರೆಸ್ ಕೆಲಸದಿಂದಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಪಂಚಾಂಗ ಮತ್ತು ತೂಗು ಪಂಚಾಂಗ ತಯಾರಾಗಿದ್ದು ಗದಗ ಜಿಲ್ಲೆಯಲ್ಲಿ. ಎಲ್ಲಾ ಜಾತಿ, ಧರ್ಮ, ವರ್ಗದವರಿಗೂ ಪೂರಕವಾಗುವಂತಹ ಪಂಚಾಂಗಗಳು ತಯಾರಾಗುತ್ತವೆ. ದೇಶ ವಿದೇಶಗಳಲ್ಲೂ ಗದಗ ಜಿಲ್ಲೆಯ ಪಂಚಾಂಗಗಳು ಮನೆಮಾತಾಗಿರುವುದು ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಕೆಲಸಗಾರರು.
Advertisement
ಗದಗ ಜಿಲ್ಲೆಯಿಂದ ಪ್ರತಿಹೊಸ ವರ್ಷದ ವೇಳೆ ಸುಮಾರು 45 ರಿಂದ 50 ಲಕ್ಷ ರೂ.ವರೆಗೆ ಕ್ಯಾಲೆಂಡರ್ ಹಾಗೂ ಪಂಚಾಂಗ ಮಾರಾಟವಾಗುತ್ತವೆ. ಇಲ್ಲಿಯ ಮುದ್ರಣಾಲಯಗಳಲ್ಲಿ ಕ್ಯಾಲೆಂಡರ್ ಹಾಗೂ ಪಂಚಾಂಗವಷ್ಟೇ ಅಲ್ಲ ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳು ತಯಾರಾಗುತ್ತವೆ. ಒಟ್ಟಿನಲ್ಲಿ ಗದಗ ಜಿಲ್ಲೆಯಿಂದ ತಯಾರದ ಕ್ಯಾಲೆಂಡರ್, ಪಂಚಾಂಗಗಳು ದೇಶ, ವಿದೇಶಿ ಕನ್ನಡಿಗರ ಮನೆಗಳಲ್ಲಿ ರಾರಾಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.