ಬೆಂಗಳೂರು: ಅಚ್ಚರಿಯ ಬೆಳವಣಿಗೆ ಎಂಬಂತೆ ಮಾಜಿ ಸಚಿವ ಜಿಟಿ ದೇವೇಗೌಡ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಅನರ್ಹ ಶಾಸಕ ವಿಶ್ವನಾಥ್, ಎಸ್.ಟಿ.ಸೋಮಶೇಖರ್ ಅವರೊಂದಿಗೆ ಬಿಎಸ್‍ವೈ ಅವರ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದ ಜಿ.ಟಿ.ದೇವೇಗೌಡ ಅವರು, ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಭೇಟಿ ಜೆಡಿಎಸ್‍ನ ಮತ್ತೊಂದು ವಿಕೆಟ್ ಪತನಕ್ಕೆ ಕಾರಣವಾಗುತ್ತಾ ಎಂಬ ಅನುಮಾನ ಮೂಡಿದೆ.
Advertisement
Advertisement
ಬಿಎಸ್‍ವೈರನ್ನ ಭೇಟಿ ಮಾಡಿದ್ದ ಜಿಟಿ ದೇವೇಗೌಡರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಸಿಎಂ ಅವರೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದರು.
Advertisement
ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಮಾತನಾಡಿದ ಬಿಎಸ್‍ವೈ ಅವರು, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದರು.
Advertisement
ಈ ಹಿಂದೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಜಿಟಿ ದೇವೇಗೌಡ ಅವರು, ಪರೋಕ್ಷವಾಗಿ ಜೆಡಿಎಸ್ ದಳಪತಿಗಳ ವಿರುದ್ಧ ಅಸಮಾದಾನ ಹೊರ ಹಾಕಿದ್ದರು. ಮೈತ್ರಿ ಸರ್ಕಾರದ ಆರಂಭದ ಒಂದು ತಿಂಗಳು ನಾನು ಸಚಿವ ಸ್ಥಾನ ಪಡೆಯಲಿಲ್ಲ. ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ದಸರಾ, ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆ, ವಿಶ್ವವಿದ್ಯಾಲಯಗಳ ಘಟಿಕೋತ್ಸವ, ನಿರಂತರ ಸಭೆಗಳಲ್ಲಿ ಭಾಗಿಯಾಗಿದ್ದರಿಂದ ಸ್ವ-ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಿಗುತ್ತಿದ್ದ ಜಿ.ಟಿ.ದೇವೇಗೌಡ ಸಿಗುತ್ತಿಲ್ಲ ಎಂದು ಕ್ಷೇತ್ರದ ಜನತೆ ನನ್ನ ಮೇಲೆ ಮುನಿಸಿಕೊಂಡಿದ್ದರು. ರಾಜಕೀಯದಲ್ಲಿ ಸಹ ವಿವಿಧ ಬೆಳವಣಿಗೆಗಳು ನಡೆದಿದ್ದರಿಂದ ಮೈತ್ರಿ ಸರ್ಕಾರ ಸಹ ಪತನಗೊಂಡಿತು. ಈ ಎಲ್ಲ ಕಾರಣಗಳಿಂದ ರಾಜಕಾರಣ ಸಾಕು ಎಂಬ ನಿರ್ಣಯಕ್ಕೆ ಬಂದಿದ್ದೇನೆ. ಬೇರೆಯವರಿಗಿಂತ ನಮ್ಮ ಪಕ್ಷದ ನಾಯಕರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ತುಂಬಾ ನೋವಾಯ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ತಾಯಿ ಚಾಮುಂಡಿಯಲ್ಲಿ ನನ್ನ ಕುಟುಂಬವೇ ಪ್ರಾರ್ಥನೆ ಮಾಡಿದೆ. ಆದರೆ ಅವರ ಬಳಿ ನಾನು ಪ್ರೀತಿ ಮತ್ತು ವಿಶ್ವಾಸವನ್ನು ನೋಡಲೇ ಇಲ್ಲ. ಹಾಗಾಗಿ ನನ್ನನ್ನು ನಿರ್ಲಕ್ಷ್ಯ ಮಾಡಲಾಯ್ತು ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಟಿಡಿ ಹಾಗೂ ಬಿಎಸ್‍ವೈ ಅವರ ಭೇಟಿಗೆ ಹೆಚ್ಚಿನ ಮಹತ್ವ ಲಭಿಸಿತ್ತು.