– ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ
ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.
Advertisement
ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.
Advertisement
ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv