ರಾಮನಗರ: ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ ಎಂದು ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಆಗಸ್ಟ್ 12ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಎಂಬ ಸಮಾವೇಶ ಆಯೋಜಿಸಲಾಗಿದೆ. ಸಿದ್ದರಾಮಯ್ಯ ಅವರ ಅನುಯಾಯಿಗಳು ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ಈ ಸಮಾವೇಶ ಆಯೋಜಿಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿರುವಾಗಲೇ ಈ ಸಂಭ್ರಮಾಚರಣೆ ನಡೆಯಲಿದೆ. ಈಗಾಗಲೇ 2023ರ ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಈ ನಡುವೆ ಸಿದ್ದರಾಮೋತ್ಸವ ಸಮಾರಂಭಕ್ಕೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬದಲಾಗುತ್ತಿದೆ ವಾತಾವರಣ- ಉಗ್ರರನ್ನು ಸದೆಬಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಈ ಕುರಿತಂತೆ ರಾಮನಗರದ ಜಯಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಒಬ್ಬ ವ್ಯಕ್ತಿ 75 ವರ್ಷ ಪೂರೈಸುವುದು ಸುಲಭವಲ್ಲ. ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಂ ವಿಚಾರವಾಗಿ ಗೊಂದಲ ಹಿನ್ನೆಲೆ, ಕಾಂಗ್ರೆಸ್‌ನಲ್ಲಿ ಯಾವತ್ತು ಗುಂಪುಗಾರಿಕೆ ಇಲ್ಲ. ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ನಂತರ ಸಿಎಂ ಯಾರು ಎಂದು ಕರೆದು ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಹೋಗಲಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಬಿಜೆಪಿಯ ಜನವಿರೋಧಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ, ಜನ ಮತ ಹಾಕಲ್ಲ ಎಂದಿದ್ದಾರೆ.
ಕಾಂಗ್ರೆಸ್‍ನಲ್ಲಿ ದಲಿತ ಸಿಎಂ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು. ಮೊದಲು ಅಧಿಕಾರಕ್ಕೆ ಬರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?