LatestLeading NewsMain PostNational

ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ (Maharashtra Assembly Speaker) ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಹುಲ್ ನಾರ್ವೇಕರ್ (Rahul Narwekar) 164 ಮತಗಳನ್ನು ಪಡೆದರು.

ರಾಹುಲ್ ನಾರ್ವೇಕರ್ ಯಾರು?: ರಾಹುಲ್ ನಾರ್ವೇಕರ್ ಮಹಾರಾಷ್ಟ್ರದ ಕೊಲಾಬಾ (Colaba) ವಿಧಾನಸಭಾ ಕ್ಷೇತ್ರದ ಶಾಸಕ. ರಾಜಕೀಯ ಕುಟುಂಬಕ್ಕೆ ಸೇರಿದ ವ್ಯಕ್ತಿ. ಮಹಾರಾಷ್ಟ್ರ ರಾಜಕೀಯದಲ್ಲಿ ಚಿರಪರಿಚಿತ ವ್ಯಕ್ತಿ. ವೃತ್ತಿಯಲ್ಲಿ ವಕೀಲರಾಗಿರುವ ರಾಹುಲ್ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಈ ಹಿಂದೆ ಶಿವಸೇನೆ ಹಾಗೂ ಎನ್‍ಸಿಪಿ ಜೊತೆಗೂ ಗುರುತಿಸಿಕೊಂಡಿದ್ದರು. ಶಿವಸೇನೆ ಯೂತ್ ವಿಂಗ್‍ನ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು.  ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಯಕತ್ವ ಘೋಷಣೆ ವದಂತಿ – ಅಖಾಡಕ್ಕೆ ಇಳಿದ ಡಿಕೆಶಿ

ಕೌಟುಂಬಿಕ ಹಿನ್ನೆಲೆ: ರಾಹುಲ್ ನಾರ್ವೇಕರ್ ತಂದೆ ಸುರೇಶ್ ನಾರ್ವೇಕರ್ ಕೌನ್ಸಿಲರ್ ಆಗಿದ್ದರು. 2014ರಲ್ಲಿ ರಾಹುಲ್ ಶಿವಸೇನೆ ಪಕ್ಷದಲ್ಲಿದ್ದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.

ಮಹಾರಾಷ್ಟ್ರ ವಿಧಾನ ಪರಿಷತ್ ಸಭಾಪತಿ ರಾಮ್ ರಾಜೇ ನಾಯ್ಕ್ ನಿಂಬಾಳ್ಕರ್ ರಾಹುಲ್ ನಾರ್ವೇಕರ್ ಅವರ ಮಾವ. ಶಿವಸೇನೆ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಎನ್‍ಸಿಪಿ ಸೇರಿದ್ದರು. ಮಾವಲ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದರೂ ರಾಹುಲ್ ಚುನಾವಣೆಯಲ್ಲಿ ಸೋತರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

ಕಾಂಗ್ರೆಸ್ ನಾಯಕ ನಾನಾ ಪಟೋಲೆ 2021ರ ಫೆಬ್ರವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.

Live Tv

Leave a Reply

Your email address will not be published.

Back to top button