– ಬಿಜೆಪಿ ಟಾರ್ಗೆಟ್ ಮಾಡೋಕೆ ಬಿಲ್ ತರ್ತಿಲ್ಲ ಎಂದ ಸಚಿವ
ಬೆಂಗಳೂರು: ದ್ವೇಷ ಭಾಷಣ ಮಸೂದೆ ಮಂಡನೆಗೆ (Hate Speech Bill) ಇಂದೇ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುತ್ತೇವೆ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ್ (G Parameshwar), ಈ ಮಸೂದೆಯನ್ನ ಬಿಜೆಪಿ ಟಾರ್ಗೆಟ್ ಮಾಡೋದಕ್ಕೆ ತರ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಸಂಬಂಧ ಮಸೂದೆ ಮಂಡನೆಗೆ ಇಂದು ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯುತ್ತೇವೆ. ಈಗ ಇರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸುವ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದ್ವೇಷ ಭಾಷಣಕ್ಕೆ ಕಡಿವಾಣ ಹಾಕಿ – ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ
ಇನ್ನೂ ದ್ವೇಷ ಭಾಷಣ ಮಸೂದೆಯನ್ನ ಬಿಜೆಪಿ (BJP) ಟಾರ್ಗೆಟ್ ಮಾಡಲು ತರ್ತಿಲ್ಲ. ಅದೆಲ್ಲ ಸುಳ್ಳು ಆರೋಪ. ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರ್ತೀವಾ? ಅವರು ಬರಲ್ವಾ? ಯಾರೇ ಬಂದರೂ ಕಾಯ್ದೆ ಅದೇ ಇರುತ್ತೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಕೆ.ಸಿ ವೇಣುಗೋಪಾಲ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ದೆಹಲಿಗೆ ಸಚಿವರ ನಿಯೋಗ ಹೋಗಬೇಕು ಅನ್ನೋದು ಎಲ್ಲಿ ಚರ್ಚೆ ಆಗಿತ್ತು? ವೇಣುಗೋಪಾಲ್ ಅವರೇ ಇಲ್ಲಿಗೆ ಬಂದಿದ್ರಲ್ಲ. ನಿನ್ನೆ ನಾನು ಭೇಟಿ ಮಾಡಿದ್ದೆ, ಅವ್ರು ಪಕ್ಕದಲ್ಲೇ ಕೂತಿದ್ರು. ಆದ್ರೆ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ ಎಂದರು. ಇದನ್ನೂ ಓದಿ: ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸಿಎಂ ಸೂಚನೆ
ಸಿಎಂ-ಡಿಸಿಎಂ ಪರ ಘೋಷಣೆ ಕೂಗಿದ ವಿಚಾರಕ್ಕೆ ಉತ್ತರಿಸಿ, ಒಬ್ಬೊಬ್ಬ ನಾಯಕರಿಗೆ ಒಂದಷ್ಟು ಅಭಿಮಾನಿಗಳು ಇರ್ತಾರೆ. ಅವರು ಜೈಕಾರ ಹಾಕುತ್ತಿರುತ್ತಾರೆ, ಅದು ತಪ್ಪು ಅಂತ ಹೇಳಕ್ಕಾಗಲ್ಲ. ಸಮಸ್ಯೆಗಳು ಬಗೆಹರಿದ್ರೆ ಇವೆಲ್ಲ ನಿಂತು ಹೋಗುತ್ತವೆ ಎಂದರು.


