ಬೆಂಗಳೂರು: 2018ರ ಚುನಾವಣೆಗೆ ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್ ಈಗ 12 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಎದುರಾಳಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ.
ಕಲಬುರಗಿ ಗ್ರಾಮೀಣ, ಕಲಬುರಗಿ ಉತ್ತರ, ಖಾನಾಪುರ, ಕೆಜಿಎಫ್ ಮತ್ತು ಚಿಂತಾಮಣಿ, ಜಗಳೂರು, ಬೇಲೂರು, ಬೆಂಗಳೂರಿನ ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಸಿ.ವಿ.ರಾಮನ್‍ನಗರ, ಬೊಮ್ಮನಹಳ್ಳಿ, ಜಯನಗರ ಕ್ಷೇತ್ರಗಳಿಂದ ಹೊಸ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
Advertisement
1 ಕಲಬುರಗಿ ಗ್ರಾಮೀಣ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಮೊದಲ ಚುನಾವಣೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ರೇಣು ನಾಯಕ್ ಬೆಳಮಗಿ ಗೆಲುವು ಸಾಧಿಸಿದ್ದರು. 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ರಾಮಕೃಷ್ಣ ಅವರು 40,075 ಮತ ಪಡೆದರೆ, ರೇಣು ನಾಯಕ್ 32,866 ಮತ ಪಡೆದು ಪರಾಭವಗೊಂಡರು. ಆದರೆ, ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದ ಅವರು ಮತ್ತೆ ಕಾಂಗ್ರೆಸ್‍ಗೆ ಸೇರಿಕೊಂಡರೂ ಅವರ ಬದಲಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಿಲಾಗಿದೆ.
Advertisement
2 ಕಲಬುರಗಿ ಉತ್ತರ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಪ್ರಾರಂಭದಿಂದಲೇ ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. 2008 ಮತ್ತು 2013ರ ಚುನಾವಣೆಯಲ್ಲಿ ಖಮರ್ ಉಲ್ಲ್ ಇಸ್ಲಾಂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಖಮರ್ ಉಲ್ ಇಸ್ಲಾಂ 50,498 ಮತ ಪಡೆದರೆ, ಕೆಜೆಪಿ ಅಭ್ಯರ್ಥಿ ನಾಶಿರ್ ಹುಸೇನ್ ಉಸ್ತಾದ್ 30,377 ಮತ ಗಳಿಸಿದ್ದರು. ಇತ್ತೀಚೆಗೆ ಖಮರ್ ಉಲ್ಲ್ ಇಲ್ಸಾಂ ನಿಧನರಾಗಿದ್ದರಿಂದ ಅವರ ಪತ್ನಿ ಫಾತೀಮಾ ಅವರಿಗೆ ಟಿಕೆಟ್ ನೀಡಲಾಗಿದೆ.
Advertisement
3 ಬೇಲೂರು: ಹಾಸನದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ವೈ.ಎನ್.ರುದ್ರೇಶ್‍ಗೌಡ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ರುದ್ರೇಶ್‍ಗೌಡ ಅವರು 48,802 ಮತ ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಕೆ.ಎಸ್. ಲಿಂಗೇಶ 41,273 ಮತ ಗಳಿಸಿದ್ದರು. ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ರುದ್ರೇಶ್‍ಗೌಡ ಪತ್ನಿ ಕೀರ್ತನಾ ಅವರಿಗೆ ಅನುಕಂಪದ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ.
Advertisement
4 ಮಹಾಲಕ್ಷ್ಮಿಲೇಔಟ್: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರದ ಇದಾಗಿದೆ. ಮೊದಲ ಚುನಾವಣೆಯಲ್ಲಿಯೇ ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಲ್.ನರೇಂದ್ರಬಾಬು ಅವರು 2015ರ ಚುನಾವಣೆಯಲ್ಲಿ 50,757 ಮತ ಪಡೆದು ಸೋತರು. ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ. ಕೆ. 66,127 ಮತ ಗಳಿಸಿ ಗೆಲವು ಸಾಧಿಸಿದ್ದರು. ಆದರೆ, ಎನ್.ಎಲ್.ನರೇಂದ್ರಬಾಬು ಅವರು ಬಿಜೆಪಿಗೆ ಸೇರಿದ್ದರಿಂದ ಎನ್.ಎಸ್.ಯು.ಐ ಮಂಜುನಾಥ್ ಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
5 ರಾಜಾಜಿನಗರ: ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಹೆಚ್ಚು ಮತಗಳ ಅಂತರದಲ್ಲಿ ಸೋಲುತ್ತಿರುವ ಕಾಂಗ್ರೆಸ್ ಈ ಬಾರಿ ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಸುರೇಶಕುಮಾರ ಅವರು 39,297 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಮಂಜುಳಾ ನಾಯ್ಡು 24,482 ಮತ ಗಳಿಸಿದ್ದರು.
6 ಸಿ.ವಿ.ರಾಮನ್‍ನಗರ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದೆ. ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಅದನ್ನು ಈ ಬಾರಿ ಒಡೆಯಲು ಕಾಂಗ್ರೆಸ್ ಬಿಬಿಎಂಪಿ ಮೇಯರ್ ಸಂಪತ್‍ರಾಜ್ ಅವರನ್ನು ಕಣಕ್ಕಿಳಿಸಿದೆ. 2013ರ ಚುನಾವಣೆಯಲ್ಲಿ ಎಸ್.ರಾಹುಲ್ ಅವರು 53,364 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪಿ.ರಮೇಶ ಅವರು 44,945 ಮತ ಗಳಿಸಿದ್ದರು.
7 ಬೊಮ್ಮನಹಳ್ಳಿ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಕಳೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಎಂ.ಸತೀಶರೆಡ್ಡಿ ಆಯ್ಕೆಯಾಗಿದ್ದಾರೆ. ಈ ಭದ್ರಕೋಟೆ ಒಡೆಯಲು ಕಾಂಗ್ರೆಸ್ ಸುಷ್ಮಾರಾಜ್ ಗೋಪಾಲರೆಡ್ಡಿ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಎಂ.ಸತೀಶ್‍ರೆಡ್ಡಿ 86,552 ಮತಗಳನ್ನು ಪಡೆದಿದ್ದರೆ, ರಾಗಭೂಷನ್.ಸಿ 60,700 ಮತ ಗಳಿಸಿದ್ದರು.
8 ಜಗಳೂರು: ದಾವಣಗೆರೆಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ರಾಜೇಶ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು, ಪುಷ್ಪಾ ಅವರಿಗೆ ನೀಡಲಾಗಿದೆ. 2013ರ ಚುನಾವಣೆಯಲ್ಲಿ ಎಚ್.ಪಿ. ರಾಜೇಶ್ ಅವರು 77,805 ಮತ ಪಡೆದಿದ್ದರೆ, ಕೆಜಿಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ 40,915 ಮತ ಗಳಿಸಿದ್ದರು.
9 ಖಾನಾಪುರ: ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗಿರುವ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಹೊಸ ಆಯ್ಕೆ ಎನ್ನುವಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರವಿಂದ ಚಂದ್ರಕಾಂತ ಪಾಟೀಲ 37,055 ಮತ ಪಡೆದಿದ್ದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಫಿಕ್ ಖತಲಬ್ ಖಾನಾಪುರಿ 20,903 ಮತಗಳನ್ನು ಗಳಿಸಿದ್ದರು.
10 ಜಯನಗರ: ಕಳೆದ ಎರಡು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ ಅವರು ಆಯ್ಕೆಯಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. 2013ರ ಚುನಾವಣೆಯಲ್ಲಿ ಬಿ.ಎನ್.ವಿಜಯಕುಮಾರ 43,990 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲ 31,678 ಮತ ಗಳಿಸಿದ್ದರು.
11 ಕೆಜಿಎಫ್: 1967ರ ವಿಧಾನ ಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಈ ಮತಕ್ಷೇತ್ರದಲ್ಲಿ ಅಧಿಕಾರ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸುವ ಉದ್ದೇಶದಿಂದ ರೂಪಾ ಶಶಿಧರ್ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ವೈ.ರಾಮಕ್ಕ 55,014 ಮತ ಪಡೆದಿದ್ದರೆ, ಜೆಡಿಎಸ್ ಎಮ್. ಭಕ್ತವತ್ಸಲಂ 28,992 ಮತ ಗಳಿಸಿದ್ದರು.
12 ಚಿಂತಾಮಣಿ: ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗಿರುವ ಕೋಲಾರದ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಲು ವಾಣಿ ಕೃಷ್ಣಾರೆಡ್ಡಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ ಅವರು 68,950 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ. ಸುಧಾಕರ 67254 ಮತ ಗಳಿಸಿದ್ದರು.
ಹೊಸ ಮುಖಗಳು
* ಗುಲ್ಬರ್ಗಾ ಗ್ರಾಮೀಣ – ವಿಜಯಕುಮಾರ್
* ಗುಲ್ಬರ್ಗಾ ಉತ್ತರ – ಫಾತೀಮ, ಖಮರುಲ್ಲಾ ಇಸ್ಲಾಂ ಪತ್ನಿ
* ಬೇಲೂರು – ಕೀರ್ತನಾ, ರುದ್ರೇಶ್‍ಗೌಡ ಪತ್ನಿ
* ಮಹಾಲಕ್ಷ್ಮಿಲೇಔಟ್ – ಎನ್.ಎಸ್.ಯು.ಐ ಮಂಜುನಾಥ್ ಗೌಡ
* ರಾಜಾಜಿನಗರ – ಪದ್ಮಾವತಿ, ಮಾಜಿ ಮೇಯರ್
* ಸಿ.ವಿ ರಾಮನ್‍ನಗರ – ಸಂಪತ್‍ರಾಜ್, ಮೇಯರ್
* ಬೊಮ್ಮನಹಳ್ಳಿ – ಸುಷ್ಮಾರಾಜ್ ಗೋಪಾಲರೆಡ್ಡಿ
* ಜಗಳೂರು – ಪುಷ್ಪಾ
* ಖಾನಾಪುರ – ಶ್ರೀ. ಅಂಜಲಿ ನಿಂಬಾಳ್ಕರ್
* ಜಯನಗರ – ಸೌಮ್ಯ ರೆಡ್ಡಿ
* ಬೊಮ್ಮನಹಳ್ಳಿ – ಸುಷ್ಮಾರಾಜಗೋಪಾಲರೆಡ್ಡಿ
* ಬೇಲೂರು – ಕೀರ್ತನಾ
* ಕೆಜಿಎಫ್ – ರೂಪಾ ಶಶಿಧರ್
* ಚಿಂತಾಮಣಿ – ವಾಣಿ ಕೃಷ್ಣಾರೆಡ್ಡಿ