Connect with us

Districts

ಫ್ರಾನ್ಸ್ ಮೂಲದ ತಾಯಿಯ ಮಗಳು ಕೊಪ್ಪಳದ ಗ್ರಾಮ ಪಂಚಾಯತ್ ಅಧ್ಯಕ್ಷೆ!

Published

on

ಕೊಪ್ಪಳ: ಫ್ರಾನ್ಸ್ ಮೂಲದ ತಾಯಿಯೊಬ್ಬರ ಮಗಳು ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹೌದು, ಪ್ರವಾಸಕ್ಕೆಂದು ಭಾರತಕ್ಕೆ ಬಂದ ಫ್ರಾನ್ಸ್ ಮಹಿಳೆ ಆ ಸ್ಥಳದ ಐತಿಹಾಸಿಕ ಹಿನ್ನೆಲೆ ಕೇಳಿ ಅಲ್ಲೇ ವಾಸವಾದರು. ಬಳಿಕ ಸ್ಥಳೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಹುಟ್ಟಿದ ಮಗಳು ಇಂದು ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಅಂಜನಾದೇವಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಮೂಲತಃ ಆನೆಗೊಂದಿಯಲ್ಲಿ ಹುಟ್ಟಿ ಬೆಳದ ಅಂಜನಾದೇವಿಯವರು ಕನ್ನಡ ಸೇರಿದಂತೆ ನಾಲ್ಕೈದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಇವರ ಕುಟುಂಬ ಸದಸ್ಯರು ಇಂದಿಗೂ ಫ್ರಾನ್ಸ್ ನಲ್ಲಿ ವಾಸವಿದ್ದಾರೆ. ವಿದೇಶಿ ಮೂಲದ ಮಹಿಳೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನಿಜಕ್ಕೂ ವಿಶೇಷವಾಗಿದೆ.

ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದ ಅಂಜನಾದೇವಿಯವರು, 2015ರಲ್ಲಿ ಗ್ರಾಮ ಪಂಚಾಯಿತಿಯ 2ನೇ ವಾರ್ಡಿನಲ್ಲಿ ಸಾಮಾನ್ಯ ಮಹಿಳಾ ಖೋಟಾದಡಿ ಸ್ಪರ್ಧಿಸಿ ಗೆದ್ದಿದ್ದರು. ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ ಕಾರಣ ಆನೆಗೊಂದಿಯ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಹೀಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ಅವಿರೋಧವಾಗಿ ಅಂಜನಾದೇವಿಯನ್ನು ಆಯ್ಕೆ ಮಾಡಿದ್ದಾರೆ. 14 ಜನ ಸಂಖ್ಯಾಬಲ ಹೊಂದಿದ ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಆನೆಗೊಂದಿ, ಕಡೇಬಾಗಿಲು, ಚಿಕ್ಕರಾಂಪುರ್ ಹಾಗೂ ಬಸವನದುರ್ಗ ಗ್ರಾಮಗಳು ಸೇರುತ್ತವೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಜನಾದೇವಿ, ನಮ್ಮ ತಾಯಿ ಶಾರದಾ(ಫ್ರಾನ್ಸುವಾ) ಮೂಲತಃ ಫ್ರಾನ್ಸ್ ಮೂಲದವರಾಗಿದ್ದು, 1965ರಲ್ಲಿ ಭಾರತದ ಪ್ರವಾಸಕ್ಕೆಂದು ಬಂದು ಇಲ್ಲಿಯೇ ನೆಲೆಸಿದ್ದರು. ನಂತರ ಸ್ಥಳೀಯರಾದ ಶಾಂತಮೂರ್ತಿ ಎಂಬವರನ್ನು ವಿವಾಹವಾಗಿದ್ದರು. ತಂದೆ-ತಾಯಿ ಅಂಜನಾದ್ರಿ ಬೆಟ್ಟದ ಸಮೀಪವೇ ವಾಸವಾಗಿದ್ದರು. ಹೀಗಾಗಿ ನನಗೆ ಅಂಜನಾದೇವಿ ಎಂದೇ ಹೆಸರನ್ನು ಇಟ್ಟಿದ್ದರು. ನಾನು ಹುಟ್ಟಿ, ಬೆಳೆದಿದ್ದು ಎಲ್ಲಾ ಆನೆಗೊಂದಿಯಲ್ಲಿಯೇ. ಈಗಲೂ ನನ್ನ ಅಜ್ಜಿ ಫ್ರಾನ್ಸ್ ನಲ್ಲಿ ಇದ್ದಾರೆ. ಅವರನ್ನು ಸಹ ನೋಡಿಕೊಂಡು ಬಂದಿದ್ದೇನೆ. ಆದರೆ ನನಗೆ ನನ್ನ ಭಾರತವೇ ತುಂಬಾ ಇಷ್ಟ. ಅಲ್ಲಿನ ವಾತಾವರಣ ನನಗೆ ಹಿಡಿಸಲಿಲ್ಲ. ಇಲ್ಲಿಯೇ ನೆಮ್ಮದಿಯಾಗಿದ್ದೇನೆಂದು ಹೇಳಿದರು.

ಮೊದಲಿನಿಂದಲೂ ನಾನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ, ಅಲ್ಲದೇ ನನ್ನ ಹಳ್ಳಿಗೆ ಏನಾದರೂ ಮಾಡಬೇಕೆಂದು ಪ್ರಯತ್ನಪಡುತ್ತಲೇ ಇದ್ದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ನಿಂತು ಜಯ ಸಾಧಿಸಿದ್ದೆ. ಈಗ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ. ನನ್ನ ಮೇಲಿಟ್ಟುರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಗ್ರಾಮದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಷಣ್ಮುಖರವರು ಮಾತನಾಡಿ, ಅಂಜನಾದೇವಿಯವರನ್ನು ಹುಟ್ಟಿನಿಂದಲೂ ನಾವು ನೋಡಿಕೊಂಡು ಬಂದಿದ್ದೇವೆ. ಗ್ರಾಮ ಅಭಿವೃದ್ದಿಯಾಗಬೇಕು ಎನ್ನುವ ಉದ್ದೇಶದಿಂದ ವಿದ್ಯಾವಂತ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದೇವೆಂದು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *