ಕೊಲ್ಕತ್ತಾ: ಲೋಕಸಭಾ ಚುನಾವಣೆ ಅಂತ್ಯವಾದರು ಪಶ್ಚಿಮಾ ಬಂಗಾಳದಲ್ಲಿ ಹಿಂಸಾಚಾರ ಇನ್ನೂ ನಿಂತಿಲ್ಲ. ಇದರ ಪರಿಣಾಮ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಓರ್ವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಶನಿವಾರ ರಾತ್ರಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡು ನಾಲ್ವರು ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರನ್ನು ಸುಕಾಂತ್ ಮಂಡಲ್, ಪ್ರದೀಪ್ ಮಂಡಲ್ ಮತ್ತು ತಪನ್ ಮಂಡಲ್ ಎಂದು ಗುರುತಿಸಿದ್ದು. ಮತ್ತೊಬ್ಬ ತೃಣಮೂಲ ಕಾರ್ಯಕರ್ತನ್ನು ಕಯಮ್ ಮೊಲ್ಲಾ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಯಂತಾನ್ ಬಸು, ಟಿಎಂಸಿ ಕಾರ್ಯಕರ್ತರು ನಮ್ಮ ಬಿಜೆಪಿ ಪಕ್ಷದ ಕೇಸರಿ ಧ್ವಜವನ್ನು ಕೀಳಲು ಬಂದಿದ್ದಾರೆ. ಇದಕ್ಕೆ ವಿರೋಧ ಮಾಡಿದ ನಮ್ಮ ಮೂರು ಜನ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಕಯಮ್ ಮೊಲ್ಲಾ ಅವರನ್ನು ಅವರೇ ಕೊಲೆ ಮಾಡಿ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಘರ್ಷಣೆಯಲ್ಲಿ ಬಿಜೆಪಿ 18 ಕಾರ್ಯಕರ್ತರು ಕಾಣೆಯಾಗಿದ್ದಾರೆ ಎಂದು ನಾಯಕರ ಆರೋಪಿಸುತ್ತಿದ್ದಾರೆ. ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಜ್ಯೋತಿಪ್ರಿಯ ಮುಲ್ಲಿಕ್, ನಾವು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿಲ್ಲ. ಬಿಜೆಪಿ ಅವರೇ ಹೊರಗಿನಿಂದ ಜನರನ್ನು ಕರೆಸಿ ನಮ್ಮ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.