ಮಂಡ್ಯ: ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ನದಿಗಳ ಸಂಗಮದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮಹಾ ಕುಂಭಮೇಳ (Kumba Mela) ಯಶಸ್ವಿಯಾಗಿ ಇಂದು ಸಂಪನ್ನಗೊಂಡಿತು.
ಹಲವು ಮಠಾಧೀಶರು ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಕುಂಭ ಸ್ನಾನ ಮಾಡಿದ ಬಳಿಕ ಸಹಸ್ರಾರು ಭಕ್ತರು ನದಿಯಲ್ಲಿ ಮಿಂದೆದ್ದು, ಮಹದೇಶ್ವರಸ್ವಾಮಿ ದರ್ಶನ ಪಡೆದರು. ಮತ್ತೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಸಚಿವರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ನಾಲ್ಕು ದಿನದ ಕುಂಭಮೇಳಕ್ಕೆ ತೆರೆ ಬಿದ್ದಿದೆ.
Advertisement
Advertisement
ಮಂಡ್ಯ (Mandya) ಜಿಲ್ಲೆ ಕೆ.ಆರ್.ಪೇಟೆ (KR Pete) ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಆಯೋಜನೆಗೊಂಡಿದ್ದ ಮಹಾ ಕುಂಭಮೇಳ ಸಡಗರ ಸಂಭ್ರಮದಿಂದಲೇ ಮುಕ್ತಾಯವಾಯಿತು. ಅಂತಿಮ ದಿನವಾದ ಇಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಕೈಂಕರ್ಯಗಳನ್ನ ನೆರವೇರಿಸಲಾಯಿತು. ಮಹದೇಶ್ವರ, ಸಂಗಮೇಶ್ವರ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಯಾಗ ಶಾಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 154 ಕಲಶಗಳಿಗೆ ವಿಶೇಷ ಪೂಜೆ ನೆರವೇರಿ, ಗಣಪತಿ, ನವಗ್ರಹ, ರುದ್ರ, ಹಾಗೂ ಕುಂಬೇಶ್ವರ ಹೋಮ ನಡೆಸಲಾಯಿತು. ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದನಾಥ ಶ್ರೀ, ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧಿಪತಿಗಳು ಪೂರ್ಣಾಹುತಿ ನೀಡಿದರು.
Advertisement
Advertisement
ಬಳಿಕ ಕುಂಬೇಶ್ವರ ಕಲಶ ಸೇರಿದಂತೆ 7 ಕಲಶಗಳ ನೀರನ್ನು ತ್ರಿವೇಣಿ ಸಂಗಮಕ್ಕೆ ಅರ್ಪಿಸಿದ ಗುರು ವರ್ಯರು, ಕುಂಭ ಸ್ನಾನ ಮಾಡಿದರು. ಇದೇ ವೇಳೆ ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಸೇರಿದಂತೆ ಅಧಿಕಾರಿಗಳು ಹಾಗೂ ಪುರೋಹಿತರು ಭಾಗಿಯಾಗಿದರು. ಬಳಿಕ ಭಕ್ತರ ಕುಂಭ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಇದನ್ನೂ ಓದಿ: ಆರ್‌ಎಸ್‌ಎಸ್, ಬಿಜೆಪಿ ಬ್ರಿಟಿಷರ ಜೊತೆಗೆ ಶಾಮೀಲಾಗಿದ್ರು: ರಾಮಲಿಂಗಾ ರೆಡ್ಡಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕುಂಭ ಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಬಾಗಿನ ಸಮರ್ಪಿಸಿದರು. ಬಳಿಕ ಸ್ವಾಮೀಜಿಗಳ ನೇತೃತ್ವದಲ್ಲಿ ಮಲೆ ಮಹದೇಶ್ವರಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕುಂಭಮೇಳ ಹಾಗೂ ಧಾರ್ಮಿಕತೆ ಬಗ್ಗೆ ಸಂದೇಶ ಸಾರುವುದಲ್ಲದೇ, 12 ವರ್ಷಕ್ಕೊಮ್ಮೆ ಕುಂಭಮೇಳ ಆಚರಣೆಗೆ ಆದೇಶ ಮಾಡುವುದಾಗಿ ತಿಳಿಸಿದರು.
ಒಟ್ಟಾರೆ ನಾಲ್ಕು ದಿನಗಳ ಮಹಾ ಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಪವಾಡ ಪುರುಷ ಮಲೆ ಮಹದೇಶ್ವರರ ಪಾದ ಸ್ಪರ್ಶವಾದ ತ್ರಿವೇಣಿ ಸಂಗಮದಲ್ಲಿ ಸಡಗರ ಸಂಭ್ರಮದಿಂದಲೇ ಧಾರ್ಮಿಕತೆ ಮೇಳೈಸಿತು. ಇದನ್ನೂ ಓದಿ: ಮಳವಳ್ಳಿ ಬಾಲಕಿ ಕುಟಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ