‘ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರ’ ಎಂದು ಹೆಮ್ಮೆಯಿಂದ ಹಾಡಿದ ಪಾಕ್ ಮುಖಂಡ

Public TV
1 Min Read
Altaf Hussain A

ಲಂಡನ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೇಲೆ ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಪಾಕಿಸ್ತಾನದ ಮುಖಂಡರೊಬ್ಬರು ಭಾರತವನ್ನು ಹೊಗಳಿ ಹಾಡಿದ್ದಾರೆ.

ಪಾಕಿಸ್ತಾನದ ಮುತ್ತಾಹಿದಾ ಕೌಮಿ ಚಳವಳಿಯ (ಎಂಕ್ಯೂಎಂ) ಸ್ಥಾಪಕ ಅಲ್ತಫ್ ಹುಸೆನ್ ಅವರು ‘ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರ’ ಹಾಡನ್ನು ಹೆಮ್ಮೆಯಿಂದ ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉರ್ದುವಿನ ಪ್ರಖ್ಯಾತ ಕವಿ, ದಾರ್ಶನಿಕ ಮಹ್ಮದ್ ಇಕ್ಬಾಲ್ ಅವರು ‘ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರ’ ಎಂಬ ಹಾಡನ್ನು ರಚಿಸಿದ್ದರು. ಎಲ್ಲಾ ನಾಡಿಗಿಂತ ಹಿಂದೂಸ್ತಾನ ಶ್ರೇಷ್ಠ ಎಂಬ ಸಂದೇಶ ಸಾರುವ ಈ ಹಾಡು ಸ್ವಾತಂತ್ರ್ಯ ಪೂರ್ವ ಹೋರಾಟದಲ್ಲಿ ದೇಶಭಕ್ತಿಯ ಕಿಚ್ಚು ಹಬ್ಬಿಸಿತ್ತು.

ಪಾಕಿಸ್ತಾನದ ಕರಾಚಿ ಮೂಲದ ಅಲ್ತಫ್ ಹುಸೇನ್ ಈಗ ಇದೇ ಹಾಡನ್ನು ಹಾಡಿದ್ದಾರೆ. ಮೇಜು ಕುಟ್ಟುತ್ತಾ ಎರಡು ಕೈಗಳನ್ನು ಬೀಸುತ್ತ ಹೆಮ್ಮೆಯಿಂದ ‘ಸಾರೆ ಜಹಾಂ ಸೆ ಅಚ್ಛಾ’ ಎಂದು ಹಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಂಡನ್‍ನಲ್ಲಿ ವಾಸಿಸುತ್ತಿರುವ ಹುಸೇನ್ ಅವರು ಕೆಲವು ದಿನಗಳ ಹಿಂದೆಯಷ್ಟೇ, ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಸರ್ಕಾರದ ಮೇಲೆ ಕಾಶ್ಮೀರದ ಜನರ ನಂಬಿಕೆ ಇಡಬಾರದು. ಪಾಕಿಸ್ತಾನ ಸರ್ಕಾರ ಹಾಗೂ ಸೇನೆ 72 ವರ್ಷಗಳಿಂದ ಕಾಶ್ಮೀರದ ಜನರಿಗೆ ಮೋಸ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ 2016ರಲ್ಲಿ ಹುಸೇನ್ ಅವರು, ಪಾಕಿಸ್ತಾನವನ್ನು ವಿಶ್ವದ ಕ್ಯಾನ್ಸರ್ ಎಂದು ಸಂದರ್ಶನವೊಂದರಲ್ಲಿ ವ್ಯಂಗ್ಯವಾಡಿದ್ದರು.

pak pm 1

ಅಲ್ತಾಫ್ ಹುಸೇನ್ ಅವರು ಭಾರತ-ಪಾಕ್ ನಡುವೆ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಬಹಿರಂಗ ಹೇಳಿಕೆ ನೀಡುತ್ತಾರೆ. ಅವರಿಗೆ ಭಾರತ ಸಹಾಯ, ಹಣ ನೀಡುತ್ತಿದೆ ಎಂದು ಪಾಕಿಸ್ತಾನ ಅನೇಕ ಬಾರಿ ಆರೋಪಿಸಿದೆ. ಆದರೆ ಎಂಕ್ಯೂಎಂ ಮತ್ತು ಭಾರತ ಎರಡೂ ಇದನ್ನು ತಿರಸ್ಕರಿಸಿವೆ.

ವಿಶೇಷವೆಂದರೆ, ಅಲ್ತಾಫ್ ಹುಸೇನ್ ಕರಾಚಿಯ ದೊಡ್ಡ ನಾಯಕ. ಕರಾಚಿ ನಗರದಲ್ಲಿ ಹುಸೇನ್ ಅವರಿಗೆ ಇನ್ನೂ ಬಲವಾದ ಹಿಡಿತವಿದೆ. ಆದರೆ ಅವರನ್ನು ಪಾಕಿಸ್ತಾನದಿಂದ ಗಡೀಪಾರು ಮಾಡಲಾಗಿದೆ. ಹೀಗಾಗಿ ಅವರು ಸದ್ಯ ಲಂಡನ್‍ನಲ್ಲಿ ವಾಸಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *