ಮಂಗಳೂರು: ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Kumar Nettar) ಕನಸಿನ ಮನೆ ನಿರ್ಮಾಣಗೊಳ್ಳುವ ಕಾಲ ಸನ್ನಿಹಿತವಾಗಿದೆ. ಕೆಲ ದಿನಗಳ ಹಿಂದೆ ಪ್ರವೀಣ್ ಕುಟುಂಬಸ್ಥರಿಗೆ ಸಂಸದ, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ಕೊಟ್ಟ ಮಾತಿನಂತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
Advertisement
ಪ್ರವೀಣ್ ನೆಟ್ಟಾರು ಕಂಡಿದ್ದ ಸುಂದರ ಮನೆಯ ಕನಸನ್ನು ನನಸು ಮಾಡುವತ್ತ ಬಿಜೆಪಿ (BJP) ಮುಂದಡಿ ಇಟ್ಟಿದೆ. ನಳಿನ್ ಕುಮಾರ್ ಕಟೀಲ್ ಧಾರ್ಮಿಕ ವಿಧಿ ವಿಧಾನದಂತೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ತುಫೈಲ್ ಹುಡುಕಾಟಕ್ಕಿಳಿದ ಕೊಡಗು ಪೊಲೀಸರು
Advertisement
Advertisement
ಪ್ರವೀಣ್ ಕಂಡಿದ್ದ ಕನಸಿನಂತೆಯೇ ಮನೆ ನಿರ್ಮಾಣಗೊಳ್ಳುತ್ತಿದೆ. ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಲಾಗಿದೆ. ಪ್ರವೀಣ್ ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಮನೆ ನಿರ್ಮಾಣ ಆಗುತ್ತಿದೆ. ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ 2,700 ಚದರ ಅಡಿಯ ಮನೆ ನಿರ್ಮಾಣ ಆಗಲಿದೆ. ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಮನೆಯನ್ನು ಪೂರ್ಣ ಮಾಡಿಕೊಡಲು ಇಂದಿನಿಂದಲೇ ಕೆಲಸ ಆರಂಭಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Advertisement
ಪ್ರವೀಣ್ ಪತ್ನಿ ನೂತನಾರವರಿಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಳಿನ್ ಕುಮಾರ್ ಕಟೀಲ್ ಇದೀಗ ಮನೆಯ ಕನಸ್ಸನ್ನು ನನಸಾಗಿಸುವತ್ತ ಹೆಜ್ಜೆ ಇರಿಸಿದ್ದಾರೆ. ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಾಣವಾಗುತ್ತಿರುವುದಕ್ಕೆ ಪತ್ನಿ ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಂಸದರು, ಸಚಿವರು ಮತ್ತು ಬಿಜೆಪಿ ಮುಖಂಡರು ಪ್ರವೀಣ್ ಅವರ ಕನಸು ನನಸು ಮಾಡಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ
ಬಿಜೆಪಿ ವತಿಯಿಂದ ಈಗಾಗಲೇ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ನೀಡಲಾಗಿದ್ದು, ಸರ್ಕಾರದಿಂದಲೂ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೆ ಪ್ರವೀಣ್ ನೆಟ್ಟಾರು ಕಾರ್ಯಾಚರಿಸುತ್ತಿದ್ದ ಯುವ ಮೋರ್ಚಾದಿಂದ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದೀಗ ಮನೆ ಕಟ್ಟುವ ಜವಾಬ್ದಾರಿಯನ್ನೂ ಪಕ್ಷ ತೆಗೆದುಕೊಂಡಿದ್ದು ಆದಷ್ಟು ಬೇಗ ಮನೆ ನಿರ್ಮಾಣಗೊಳ್ಳಲಿ ಎನ್ನುವುದು ಪ್ರವೀಣ್ ಪೋಷಕರು ಮತ್ತು ಕಾರ್ಯಕರ್ತರ ಆಶಯವಾಗಿದೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಪ್ರವೀಣ್ ಅವರ ತಂದೆ, ತಾಯಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶಂಕುಸ್ಥಾಪನೆಗೆ ಸಾಕ್ಷಿಗಳಾದರು. ಜೊತೆಗೆ ಪ್ರವೀಣ್ ನೆಟ್ಟಾರು ಸಮಾಧಿಗೆ ನಮನ ಸಲ್ಲಿಸಿದರು.