ಬೆಂಗಳೂರು: ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಕೊಲೆಯಿಂದಾಗಿ ಹೆಗ್ಗನಹಳ್ಳಿ ಸರ್ಕಲ್ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾವುದೇ ಸಂದರ್ಭದಲ್ಲಿ ಗಲಾಟೆಯಾಗುವ ಸಾಧ್ಯತೆಯಿದ್ದು, ಮೃತ ಗೋವಿಂದೇಗೌಡ ಮತ್ತು ಚಿಕ್ಕತಿಮ್ಮೇಗೌಡ ಮನೆ ಬಳಿ ಮತ್ತು ಗೋವಿಂದೇಗೌಡನ ಮನೆ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ. ಇದರಿಂದ ಒಂದ್ಕಡೆ ದಿವಂಗತ ಚಿಕ್ಕತಿಮ್ಮೇಗೌಡನ ಜನ್ಮದಿನದ ಸಂಭ್ರಮ ಇದ್ದರೆ, ಮತ್ತೊಂದೆಡೆ ಗೋವಿಂದೇಗೌಡನ ಸಾವಿನ ಸೂತಕ ಆವರಿಸಿದೆ.
ಚಿಕ್ಕತಿಮ್ಮೇಗೌಡನ ಕೊಲೆಯ ವೈಷಮ್ಯದ ಹಿನ್ನೆಲೆಯಲ್ಲೇ ಈ ಕೊಲೆ ನಡೆದಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಕಲ್ಯಾಣ ಮಂಟಪಕ್ಕೆ ನುಗ್ಗಿ ಡ್ರ್ಯಾಗರ್ ನಿಂದ ಎದೆಗೆ ಮೂರು ಬಾರಿ ಇರಿದು ಮಾಜಿ ಕಾರ್ಪೋರೇಟರ್ ಬರ್ಬರ ಕೊಲೆ
ಏನಿದು ಘಟನೆ?: ಶನಿವಾರ ಸಂಜೆ ದುಷ್ಕರ್ಮಿಗಳು ರಾಜಗೋಪಾಲನಗರದ ಮಾತೃಶ್ರೀ ಕಲ್ಯಾಣ ಮಂಟಪಕ್ಕೆ ನುಗ್ಗಿ ಮದುವೆಗೆ ಆಗಮಿಸಿದ್ದ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಅವರ ಎದೆಗೆ ಡ್ರ್ಯಾಗರ್ ನಿಂದ ಮೂರು ಬಾರಿ ಇರಿದಿದ್ದಾರೆ. ಘಟನೆಯಿಂದ ಹಲ್ಲೆಗೊಳಗಾದ ನಂತರ ಗೋವಿಂದೇಗೌಡರನ್ನು ಸುಂಕದಕಟ್ಟೆಯ ಲಕ್ಷ್ಮಿ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ, ತೀವ್ರ ರಕ್ತಸ್ರಾವದಿಂದಾಗಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.