ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ದೆಹಲಿಯ ಏಮ್ಸ್ (AIIMS) ಆಸ್ಪತ್ರೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
74 ವರ್ಷದ ಜಗದೀಪ್ ಧನಕರ್ ಅವರಿಗೆ ಜನವರಿ 10 ರಂದು ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡೆರಡು ಬಾರಿ ಪ್ರಜ್ಞೆ ತಪ್ಪಿದ್ದರು. ಹೀಗಾಗಿ ಸೋಮವಾರ (ಇಂದು) ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆಯ ಭಾಗವಾಗಿ MRI ಸ್ಕ್ಯಾನಿಂಗ್‌ಗೂ ಒಳಪಡಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?
ಏನಾಗಿತ್ತು?
ಧನಕರ್ ಅವರು ಶನಿವಾರ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದಾಗ ಎರಡು ಬಾರಿ ಪ್ರಜ್ಞೆ ಕಳೆದುಕೊಂಡಿದ್ದರು. ಹಾಗಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಸೂಚಿಸಲಾಗಿತ್ತು. 2 ದಿನ ವಿರಾಮ ಪಡೆದಿದ್ದರು. ಇಂದು ಆಸ್ಪತ್ರೆಗೆ ದಾಖಲಾಗಲೇಬೇಕೆಂದು ಒತ್ತಾಯಿಸಿದ್ದರಿಂದ ಅವರನ್ನ ಏಮ್ಸ್‌ಗೆ (AIIMS) ದಾಖಲಿಸಲಾಗಿದೆ.
ಕಳೆದ ವರ್ಷ ಜುಲೈ 21 ರಂದು ಧನಕರ್ ಅವರು ಆರೋಗ್ಯದ ಕಾರಣಗಳನ್ನ ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂಬ ಆರೋಪಗಳು ಪ್ರತಿಪಕ್ಷಗಳಿಂದ ಕೇಳಿಬಂದಿತ್ತು.
ಅಧಿಕಾರಿಗಳು ಹೇಳುವ ಪ್ರಕಾರ, ಧನಕರ್ ಕಳೆದ ಕೆಲವು ತಿಂಗಳುಗಳಲ್ಲಿ ಕಛ್‌ನ ರಣ್, ಉತ್ತರಾಖಂಡ, ಕೇರಳ ಮತ್ತು ದೆಹಲಿ ಸೇರಿದಂತೆ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಹಲವು ಬಾರಿ ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್ ರಿಸೈನ್ ಮಾಡಿದ್ದು ಯಾಕೆ?



