ಮಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ ಕುಮಾರ್(67) ವಿಧಿವಶರಾಗಿದ್ದಾರೆ. ಕಳೆದ 6 ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಧನಂಜಯ್ ಕುಮಾರ್ ಇಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇತ್ತೀಚೆಗೆ ಆರೋಗ್ಯ ತೀರಾ ಬಿಗಡಾಯಿಸಿದ ಕಾರಣ ಮಾಜಿ ಸಚಿವರು ಕೋಮ ಸ್ಥಿತಿಯಲ್ಲಿದ್ದು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ತುಂಬಾ ಕೃಶವಾಗಿದ್ದರು.
ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ವಿ.ಧನಂಜಯ ಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಬಿಜೆಪಿಯಲ್ಲಿ ರಾಜಕೀಯ ಜೀವನ ಆರಂಭಿಸಿದ ಧನಂಜಯ್ ಕುಮಾರ್, ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪ ಕೆಜಿಪಿ ಆರಂಭಿಸಿದಾಗ ಅವರ ಜೊತೆ ಹೆಜ್ಜೆ ಹಾಕಿದ್ದರು. 2016 ರಲ್ಲಿ ಧನಂಜಯ್ ಕುಮಾರ್ ಜೆಡಿಎಸ್ ಗೆ ಸೇರ್ಪಡೆಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv