ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾದ ನಗರದ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಮನೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಭೇಟಿ ನೀಡಿದ್ದಾರೆ.
ನಗರದ ಜೆಡಿಎಸ್ ಮುಖಂಡರೊಂದಿಗೆ ಮಾಜಿ ಪ್ರಧಾನಿಯವರು ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಬಶೀರ್ ಅವರ ಕಿರಿಯ ಮಗನ ಬಯೋಡಾಟಾ ಪಡೆದ ಅವರು, ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.
Advertisement
Advertisement
ಇದಕ್ಕೂ ಮೊದಲು ಸುರತ್ಕಲ್ ನ ಕಾಟಿಪಳ್ಳದಲ್ಲಿರೋ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದರು. ದೀಪಕ್ ರಾವ್ ಅವರ ತಾಯಿ ಪ್ರೇಮಾರವರ ಪರಿಸ್ಥಿತಿ ಕಂಡು ದುಖಿಃತರಾದ ದೇವೇಗೌಡರು, ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಎಚ್‍ಡಿಡಿ ಅವರಿಗೆ ಜೆಡಿಎಸ್ ಮುಖಂಡರಾದ ಬಿ.ಎಂ. ಫಾರೂಕ್, ಮಹಮ್ಮದ್ ಕುಂಞ ಸಾಥ್ ನೀಡಿದರು.
Advertisement
Advertisement
ದೀಪಕ್ ಹತ್ಯೆ: ಜನವರಿ 3ರಂದು ಮಧ್ಯಾಹ್ನ ದೀಪಕ್ ರಾವ್ ಅವರು ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕೂಡಲೇ ಘಟನೆಯ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದರು. ನಂತರ ಅವರನ್ನು ಅಜ್ಞಾತಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಹಲವಾರು ಪ್ರತಿಭಟನೆಗಳು ನಡೆದವು. ಅಲ್ಲದೇ ಬಡ ಕುಟುಂಬದಿಂದ ಬಂದಿರುವ ದೀಪಕ್, ಮನೆಗೆ ಆಧಾರಸ್ತಂಭವಾಗಿದ್ದರಿಂದ ಮಗನನ್ನು ಕಳೆದುಕೊಂಡ ತಾಯಿಗೆ ನೆರವು ನೀಡಲು ಹಲವಾರು ಸಂಘ-ಸಂಸ್ಥೆಗಳು ಮುಂದೆ ಬಂದವು. ಸುಮಾರು 43 ಲಕ್ಷ ರೂ. ನೆರವು ದೊರೆತಿದೆ.
ಬಶೀರ್ ಮೇಲೆ ಹಲ್ಲೆ: ಇತ್ತ ದೀಪಕರ್ ರಾವ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರು ಬೂದಿ ಮುಚ್ಚಿ ಕೆಂಡದಂತಾಗಿದ್ದು, ಅಂದೇ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಶೀರ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಬಶೀರ್ ಮೇಲಿನ ಹಲ್ಲೆಯ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.