ಸೋನಿಯಾಗೆ ಎಚ್‍ಡಿಡಿ ಬರೆದ ಪತ್ರದಿಂದ ದೋಸ್ತಿಗಳಲ್ಲಿ ದಂಗಲ್ ಆರಂಭ?

Public TV
2 Min Read
sonia

– ಸಿದ್ದರಾಮಯ್ಯ ವಿರುದ್ಧ 18 ಪುಟಗಳ ಪತ್ರದಲ್ಲಿ ದೂರು
– ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅಡ್ಡಿ
– ಮಾಜಿ ಸಿಎಂಗೆ ಕಡಿವಾಣ ಹಾಕಿ
– ಪತ್ರದ ವಿಚಾರ ಗೊತ್ತಾಗುತ್ತಿದ್ದಂತೆ ಸಿದ್ದರಾಮಯ್ಯ ಕೆಂಡಾಮಂಡಲ

ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರ ಮಧ್ಯೆ ವಿರೋಧ ಇದ್ದರೂ ಕೈ, ತೆನೆ ನಾಯಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಪ್ರಚಾರ ಮಾಡಿದ್ದರು. ಆದರೆ ಈಗ ಫಲಿತಾಂಶಕ್ಕೂ ಮುನ್ನವೇ ನಾಯಕರ ನಡುವೆ ವಾಕ್ಸಮರ ಜೋರಾಗಿದ್ದು, ಈ ವಾಕ್ಸಮರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರೆದ ಪತ್ರ ಕಾರಣವಂತೆ.

ಹೌದು. ದೇವೇಗೌಡರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ 18 ಪುಟಗಳ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಹೇಗೆ ಅಡ್ಡಿ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರ ಹೈ ಕಮಾಂಡ್ ನಿಂದ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.

dks hdk congress jds

ಗೌಡರ ಆರೋಪಗಳೇನು?:
ಸುಮಾರು 18 ಪುಟಗಳ ಪತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಆರೋಪಗಳು ಸುರಿಮಳೆಯನ್ನೇ ಸುರಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದ್ದರೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಅವಕಾಶವಿತ್ತು. ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ.

ಸರ್ಕಾರವನ್ನ ದುರ್ಬಲಗೊಳಿಸಿ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ದೋಸ್ತಿಗಳಿಗೆ ಕಮ್ಮಿ ಸೀಟು ಬಂದರೆ ಅದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣರಾಗಿರುತ್ತಾರೆ. ಸಿದ್ದರಾಮಯ್ಯ ತಂತ್ರದಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮೈತ್ರಿ ಫಲಕೊಟ್ಟಿಲ್ಲ. ಜೆಡಿಎಸ್‍ನಲ್ಲಿದ್ದಾಗ ಅಹಿಂದ ಚಟುವಟಿಕೆ ನಡೆಸಿ ಆ ಬಳಿಕ ಅವರು ಕಾಂಗ್ರೆಸ್‍ಗೆ ಬಂದು ಮುಖ್ಯಮಂತ್ರಿಯಾದರು. ಹೀಗಾಗಿ ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ನೀವು ಸಿದ್ದರಾಮಯ್ಯರನ್ನು ನಿಯಂತ್ರಿಸಲೇಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Congress JDS 6

ಆಪ್ತರಿಂದ ಮತ್ತೆ ಅಭಿಯಾನ:
ದೇವೇಗೌಡರ ಪತ್ರದ ಬಗ್ಗೆ ಕೇಳಿ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಇದರ ಬೆನ್ನಲ್ಲೇ `ಮತ್ತೆ ಸಿದ್ದರಾಮಯ್ಯ ಸಿಎಂ’ ಅಭಿಯಾನಕ್ಕೆ ಆಪ್ತರು ಮತ್ತೆ ಚಾಲನೆ ನೀಡಿದ್ದಾರೆ. ಈ ಮೂಲಕ `ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ’ ಎಂಬ ಜನಾಭಿಪ್ರಾಯ ಮೂಡಿಸುವ ಯತ್ನ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಆಪ್ತರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎನ್ನುವ ಮೂಲಕ ದೋಸ್ತಿ ನಾಯಕರ ನೆಮ್ಮದಿ ಕೆಡಿಸಿದ್ದಾರೆ. ಹೀಗೆ ಗೊಂದಲ ಮೂಡಿಸಿ ಸಮ್ಮಿಶ್ರ ಸರ್ಕಾರ ಸ್ಥಿರವಾಗಿಲ್ಲ ಎಂಬ ಜನಾಭಿಪ್ರಾಯ ಮೂಡಿಸುವ ದಾಳವನ್ನ ಸಿದ್ದರಾಮಯ್ಯ ಉರುಳಿಸುತ್ತಿದ್ದಾರೆ ಎನ್ನಲಾಗಿದೆ.

ಪತ್ರ ಬರೆದಿದ್ದು ಯಾಕೆ?:
ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ನಾವು ವಿರೋಧ ಪಕ್ಷದಲ್ಲಿ ಕುಳಿತರೆ ಮಾತ್ರ ಮುಂದಿನ ಬಾರಿ ಕಾಂಗ್ರೆಸ್ಸಿಗೆ ಅವಕಾಶ ಹೆಚ್ಚು ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಸೋನಿಯಾ ಗಾಂಧಿಗೆ ದೇವೇಗೌಡರು 18 ಪುಟಗಳ ಪತ್ರ ಬರೆದು ದೂರು ಕೊಟ್ಟಿದ್ದಾರೆ.

sonia

ಫುಲ್ ಗರಂ:
ಹಿಂದೆ ತನ್ನ ವಿರುದ್ಧ ಜೆಡಿಎಸ್ ನಾಯಕರು ಮಾತನಾಡಿದ್ದರೂ ಸಿದ್ದರಮಯ್ಯ ಬಹಿರಂಗವಾಗಿ ಜಾಸ್ತಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಮೋದಿ ಮತ್ತು ಬಿಜೆಪಿ ನಾಯಕರನ್ನು ಟೀಕಿಸಲು ಟ್ವಿಟ್ಟರ್ ಖಾತೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಭಿನ್ನಾಭಿಪ್ರಾಯದ ಬಗ್ಗೆ ಮಾಧ್ಯಮಗಳು ಕೇಳಿದಾಗ, ಈ ವಿಚಾರವನ್ನು ಸಮನ್ವಯ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿ ಅಲ್ಲಿಗೆ ಮುಗಿಸುತ್ತಿದ್ದರು. ಆದರೆ ಈ ಬಾರಿ ಬಹಿರಂಗವಾಗಿಯೇ ಮಾಧ್ಯಮಗಳ ಜೊತೆ ಮತ್ತು ಟ್ವಿಟ್ಟರ್ ನಲ್ಲಿ ಖಾರವಾದ ಪದಗಳನ್ನು ಬಳಸಿ ಟೀಕೆ ಮತ್ತು ಟಾಂಗ್ ನೀಡುತ್ತಿದ್ದಾರೆ. ದೇವೇಗೌಡರು ಬರೆದ ಪತ್ರಕ್ಕೆ ಸಿದ್ದರಾಮಯ್ಯ ಸಿಟ್ಟಾಗಿದ್ದು, ಈ ಸಿಟ್ಟಿನ ಫಲವೇ ಸರಣಿ ಟ್ವೀಟ್ ಗಳು ಎನ್ನಲಾಗುತ್ತಿದೆ.

siddaramaiah 3

 

Share This Article
Leave a Comment

Leave a Reply

Your email address will not be published. Required fields are marked *