ಬೆಂಗಳೂರು: ಯಾವುದೇ ಕಾರಣಕ್ಕೂ ಜೆಡಿಎಸ್ (JDS) ಪಕ್ಷವನ್ನ ಬಿಜೆಪಿ ಜೊತೆ ವಿಲೀನ ಮಾಡೊಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ (H.D.Deve Gowda), ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ, ಹಾಸನ ಸಮಾವೇಶದಲ್ಲಿ ಬಿಜೆಪಿ ಜೊತೆ ಮೈತ್ರಿಗೆ ವಿರೋಧ ಮಾಡಿ, ಜೆಡಿಎಸ್‌ನ ಜಾತ್ಯತೀತ ನಿಲುವಿನ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು. ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜೊತೆ ಮೈತ್ರಿ ಆಗಿದ್ದರು ಅಂತ ಸಿದ್ದರಾಮಯ್ಯ ಭಾಷಣ ಮಾಡಿದ್ರು. ಇದಕ್ಕೆ ತಿರುಗೇಟು ಕೊಟ್ಟ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ – ಸಿಎಂ ಸಹಿಯನ್ನೇ ನಕಲು ಮಾಡಿದ ಕಿರಾತಕರು
ಜೆಡಿಎಸ್ ಪಕ್ಷ ನಡೆಸಲು ಸಮರ್ಥ ನಾಯಕ ಕುಮಾರಸ್ವಾಮಿ ಇದ್ದಾರೆ. ಲೋಕಸಭೆಯಲ್ಲಿ ಕುಮಾರಸ್ವಾಮಿ ಸೀಟು ಹಂಚಿಕೆ ಮಾಡಿಕೊಳ್ತಾರೆ. ಆದರೆ ಪಕ್ಷ ವಿಲೀನ ಮಾಡೊಲ್ಲ. ಮರ್ಜ್ ಮಾಡ್ತಾರೆ ಅನ್ನೋದು ನಿಮ್ಮ ಕಲ್ಪನೆ. ನಿಮಗೆ ತಾಳ್ಮೆ ಇರಲಿ. ಅ ದಿನಗಳನ್ನ ನಿಮ್ಮ ಕಣ್ಣಿಂದ ನೋಡ್ತೀರಾ. ಆಗ ನಾನು ಇರುತ್ತೇನೆ ಎಂದು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ ಪಕ್ಷ ಜೆಡಿಎಸ್ ಮುಗಿಸಬೇಕು ಅಂತ ನಿನ್ನೆಯಿಂದ ಮಾಡ್ತಿಲ್ಲ. ನನ್ನ ಸರ್ಕಾರ ಯಾವ ತಪ್ಪಿಗೆ ತೆಗೆದರು? ಕುಮಾರಸ್ವಾಮಿ ಅವರ ಸರ್ಕಾರ ಯಾಕೆ ತೆಗೆದರು? ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂದವರು ಕಾಂಗ್ರೆಸ್‌ನವರು. ಅವರೇ ಯಾಕೆ ಸರ್ಕಾರ ತೆಗೆದರು? ಮಮತಾ ಬ್ಯಾನರ್ಜಿ ಬಿಜೆಪಿ ಜೊತೆ ಇರಲಿಲ್ಲವಾ? ಈಗ ರಾಹುಲ್ ಗಾಂಧಿ ಜೊತೆ ಇಲ್ಲವಾ? ಇದು ಜಾತ್ಯತೀತನಾ? ಸಿದ್ದರಾಮಯ್ಯ ಅವರೇ ನಿಮ್ಮ ಜಾತ್ಯತೀತ ಕಲ್ಪನೆ ನೀವೇ ಇಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಸೀರ್ ಹುಸೇನ್‍ರನ್ನು ಆರೋಪಿ ನಂ.4 ಎಂದು ಪರಿಗಣಿಸಿ ಕ್ರಮ ಕೈಗೊಳ್ಳಿ: ವಿಜಯೇಂದ್ರ
ಇದೇ ವೇಳೆ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು, ಅಮಿತ್ ಶಾ, ನಡ್ಡಾ, ಮೋದಿ ಅವರ ಜೊತೆ ಅಂತಿಮ ತೀರ್ಮಾನ ಮಾಡ್ತಾರೆ. ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಆಗಬಹುದು ಎಂದರು.