ಬೆಂಗಳೂರು: ಸೋಮವಾರ ಡಿ.ಕೆ.ಶಿವಕುಮಾರ್ ಅವರು ಕಣ್ಣೀರು ಹಾಕಿದ್ದರ ಕುರಿತು ಇಬ್ಬರು ಡಿಸಿಎಂಗಳು ನೀಡಿದ ಹೇಳಿಕೆಗೆ ಇಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದ್ದು, ಹಾಲಿ ಸಿಎಂ ಹಾಗೂ ಡಿಸಿಎಂಗಳ ಹಿಂದಿನ ಪ್ರಕರಣಗಳನ್ನು ಕೆದಕುವ ಮೂಲಕ ತಿರುಗೇಟು ನೀಡಿದ್ದಾರೆ.
ಇಂದು ಕೆಪಿಸಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಇಬ್ಬರು ಡಿಸಿಎಂಗಳು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ಹಿಂದೆ ನಿಮ್ಮ ಹಾಲಿ ಸಿಎಂ ಜೈಲಿಗೆ ಹೋಗಿದ್ದರಲ್ಲ. ಅವರು ಉಪ್ಪು ತಿಂದಿದ್ದರೋ ಅಥವಾ ಸಕ್ಕರೆ ತಿಂದು ಜೈಲಿಗೆ ಹೋಗಿದ್ದರಾ ಎಂದು ಇಬ್ಬರು ಉಪಮುಖ್ಯಮಂತ್ರಿಗಳ ವಿರುದ್ಧ ವಿ.ಎಸ್.ಉಗ್ರಪ್ಪ ಹರಿಹಾಯ್ದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ? ಅವರು ಸಕ್ಕರೆ ತಿಂದಿದ್ದರಾ, ಉಪ್ಪು ತಿಂದಿದ್ದರಾ? ಯಡಿಯೂರಪ್ಪನವರು ಚೆಕ್ ರೂಪದಲ್ಲಿ ಹಣ ಪಡೆದಿದ್ದಕ್ಕೆ ಜೈಲಿಗೆ ಹೋಗಿದ್ದರು. ಸದನದಲ್ಲಿ ಬ್ಲೂ ಫಿಲಂ ನೋಡಿದ್ದಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ ಕೊಟ್ಟಿದ್ದರು ಎಂದು ಕಿಡಿ ಕಾರಿದರು.
ಸಿ.ಸಿ.ಪಾಟೀಲ್ ಯಾಕೆ ರಾಜೀನಾಮೆ ನೀಡಿದ್ದರು. ಇವರೆಲ್ಲ ಬ್ಲೂ ಫಿಲಂ ನೋಡಿ ತಾನೇ ರಾಜೀನಾಮೆ ನೀಡಿದ್ದು. ಉಪ್ಪು ತಿನ್ನದೆ ಸಕ್ಕರೆ ತಿಂದು ರಾಜೀನಾಮೆ ಕೊಟ್ಟಿದ್ದರಾ? ಡಿಸಿಎಂ ಅಶ್ವತ್ಥ ನಾರಾಯಣ್ ಅವರ ಬ್ಯಾಂಕ್ ಬ್ಯಾಲೆನ್ಸ್ ಈಗ ಎಷ್ಟಿದೆ? ಶಾಸಕರಾಗುವ ಮುನ್ನ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿತ್ತು ಎಂದು ನೇರವಾಗಿ ಅಶ್ವತ್ಥ ನಾರಾಯಣ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಮನೆಯಲ್ಲಿ 5 ಕೋಟಿ ರೂ. ಹಣ ಇಟ್ಟುಹೋಗಿದ್ದರು ಎಂದು ಶ್ರೀನಿವಾಸ್ ಗೌಡ ಸದನಲ್ಲಿಯೇ ಆರೋಪ ಮಾಡಿದ್ದರು. ಇದರ ಬಗ್ಗೆ ಐಟಿಯವರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಲ್ಲ ಯಾಕೆ? ಯಡಿಯೂರಪ್ಪನವರು ಫೋನಿನಲ್ಲಿ ಮಾತನಾಡಿದರ ಕುರಿತು ಸಹ ತನಿಖೆ ನಡೆಸಲಿಲ್ಲ. ಶ್ರೀನಿವಾಸ್ ಗೌಡ ಸದನದಲ್ಲಿಯೇ ಆರೋಪ ಮಾಡಿದ್ದಾರೆ. ಇದು ಪಬ್ಲಿಕ್ ಡಾಕ್ಯುಮೆಂಟ್, ಇದರ ಬಗ್ಗೆ ಯಾಕೆ ಇಡಿ, ಐಟಿ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಡಿ.ಕೆ.ಶಿವಕುಮಾರ್ 80 ಎಕರೆ ಜಮೀನ್ದಾರರ ಮಗ. ಅವರು ವ್ಯಾಪಾರ ವ್ಯವಹಾರ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಅವರ ಮೇಲೆ ಯಾವುದೇ ದೂರು ಇರಲಿಲ್ಲ. ಗುಜರಾತಿನ ಶಾಸಕರಿಗೆ ರಕ್ಷಣೆ ಕೊಟ್ಟ ಕಾರಣಕ್ಕೆ ಅವರ ಮೇಲೆ ಐಟಿ, ಇಡಿ ರಾಜಕೀಯ ಪ್ರೇರಿತ ದಾಳಿ ನಡೆಸಿದ್ದಾರೆ. ವಿಚಾರಣೆ ನೆಪದಲ್ಲಿ ರಾಜಕೀಯ ಪ್ರೇರಿತ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪರ ಉಗ್ರಪ್ಪ ಬ್ಯಾಟಿಂಗ್ ಮಾಡಿದ್ದಾರೆ.
ನಾವು ಸೇಡಿನ ರಾಜಕಾರಣ ಮಾಡಿದವರಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ತನಿಖೆ ನಡೆಸುವ ಸಂಸ್ಥೆಗಳನ್ನು ಸ್ವತಂತ್ರವಾಗಿ ಬಿಟ್ಟಿದ್ದೆವು. ಅವುಗಳನ್ನು ರಾಜಕೀಯವಾಗಿ ಎಂದೂ ಬಳಸಿಕೊಳ್ಳಲಿಲ್ಲ. ಅಧಿಕಾರದಲ್ಲಿದ್ದೇವೆ ಎಂದು ಯಾರನ್ನೂ ಜೈಲಿಗೆ ಹಾಕಲಿಲ್ಲ. ಆಡಿಯೋ ಪ್ರಕರಣದಲ್ಲಿ ಜೈಲಿಗೆ ಹಾಕಿದ್ದರೆ ಏನಾಗುತ್ತಿತ್ತು. ಮಾಧ್ಯಮಗಳು ದ್ವೇಷದ ರಾಜಕಾರಣ ಅಂತ ಹಾಕುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಇಡಿ ಅಧಿಕಾರಿಗಳ ಬಳಿ ವಿಚಾರಣೆಗೆ ತೆರಳುವುದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಣ್ಣೀರು ಹಾಕಿದ್ದರು. ಇದಕ್ಕೆ ಡಿಸಿಎಂಗಳಾದ ಅಶ್ವತ್ಥ ನಾರಾಯಣ ಹಾಗೂ ಗೋವಿಂದ ಕಾರಜೋಳ ಅವರು ಪ್ರತಿಕ್ರಿಯಿಸಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಕುಡಿಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಕಾಂಗ್ರೆಸ್ ನಾಯಕರು ಸಿಟ್ಟಿಗೆದ್ದು ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.