ಗಂಡಸ್ತನದ ಬಗ್ಗೆ ಮಾತಾಡಿ ಸುದ್ದಿಯಾದ್ರು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್

Public TV
2 Min Read
GLB

ಕಲಬುರಗಿ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವರೊಬ್ಬರು ಗೂಂಡಾ ಪ್ರಚೋದನೆ ನೀಡಿ ಸುದ್ದಿಯಾಗಿದ್ದಾರೆ. ವಿರೋಧ ಪಕ್ಷದವರು 10 ಏಟು ಹೊಡೆದ್ರೆ ನೀವು ಒಂದಾದ್ರು ಹೊಡಿರಿ. ಅದು ಬಿಟ್ಟು ಸುಮ್ಮನೆ ಇರೋದು ಗಂಡಸ್ತನ ಅಲ್ಲಾ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಮಾತನಾಡಿರುವ ಶರಣಪ್ರಕಾಶ್ ಪಾಟೀಲ್, ನಾನು ಬಹಿರಂಗವಾಗಿ ಹೊಡೀರಿ ಬಡೀರಿ ಅಂತ ಹೇಳೋದಕ್ಕೆ ಆಗೋದಿಲ್ಲ ಅಂದಿದ್ದಾರೆ. ಸಚಿವರು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಚೋದಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?;
ವಿಧಾನಸಭೆ ಚುನಾವಣೆ ಮುನ್ನ ಅಡಕಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಆಮೇಲೆ ನಾನೂ ಬಂದಾಗಲೂ ಕೂಡ ಜನ ನನ್ನ ಕಾರ್ ತಡೆದು ಪ್ರತಿಭಟನೆ ಮಾಡಲು ಬಂದಿದ್ದರು. ಆವಾಗ ನಾನು ಕೇಳಿದೆ ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಅಂತ. ಆ ಸಂದರ್ಭದಲ್ಲಿ ಮಂತ್ರಿಯಾಗಿದ್ದೆ. ನಾನು ಮನಸ್ಸು ಮಾಡಿದಿದ್ರೆ ಆವಾಗಲೇ ಅವರನ್ನು ಒದ್ದು ಒಳಗೆ ಹಾಕಬಹುದಾಗಿತ್ತು. ಆದ್ರೆ ಜನ ನಾವೇನು ಕೇಳಕ್ಕೆ ಬಂದ್ವಿ ಆವಾಗ ಅವರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಅಂತ ಹೇಳೋದು ಬೇಡ. ಅಲ್ಲದೇ ಹಾಗೆ ಮಾಡಿದ್ರೆ ಅಧಿಕಾರ ದುರುಪಯೋಗ ಮಾಡಿಕೊಂಡ್ರು ಅಂತಾರೆ ಅದಕ್ಕೆ ಸುಮ್ಮನಿದ್ದೆ. ಆದ್ರೆ ಈವಾಗ ನಾನು ಅಧಿಕಾರದಲ್ಲಿಲ್ಲ. ಹೀಗಾಗಿ ಈಗ ಏನಾದ್ರು ಮಾಡಿದ್ರೆ ಸುಮ್ಮನಿರೋದಿಲ್ಲ ಅಂತ ಹೇಳಿದ್ದಾರೆ.

vlcsnap 2018 09 20 10h25m01s87

ನೀವ್ಯಾಕೆ ನಮಗೆ ಅವರು ಹೊಡೆದ್ರು, ಇವರು ಹೊಡೆದ್ರು ಹೇಳುತ್ತೀರಾ. ಹೊಡೆಸಿಕೊಳ್ಳೋಕೆ ಬಿಟ್ಟಿದ್ದಕೆ ನಿಮಗೆ ಹೊಡೀತಾರೆ. ಸ್ಪಷ್ಟವಾಗಿ ಹೇಳುತ್ತೇನೆ. ಯಾರ ತಂಟೆಗೂ ನಾವು ಹೋಗಬಾರದು, ಯಾರಿಗೂ ಹೊಡೆಯೋದಕ್ಕೆ ಹೋಗಬಾರದು. ನಮ್ಮ ತಂಟೆಗೆ ಬಂದ್ರೆ ಅವರು 10 ಏಟು ಕೊಟ್ರೆ ನಿಮಗೆ ಒಂದು ಹೊಡೆಯೋದಕ್ಕೆ ಆಗಲ್ವ ಅಂತ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

ಹೊಡೀರಿ ಬಡೀರಿ ಅಂತ ಬಹಿರಂಗವಾಗಿ ಹೇಳೋದಿಕೆ ಆಗಲ್ಲ. ಅವರು ಹೊಡೀತಾರೆ ಅಂತ ಹೇಡಿಯಂತೆ ಮನೆಯಲ್ಲಿ ಕುಳಿತುಕೊಳ್ಳೋದು ಗಂಡಸ್ತನ ಅಲ್ಲ. ಒಟ್ಟಿನಲ್ಲಿ ನಿಮಗೆ ಹೊಡೆದ್ರೆ ನೀವೂ ವಾಪಸ್ ಹೊಡಿಬೇಕು ಅಂತ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *