ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆರಲು ತುದಿಗಾಲಿನಲ್ಲಿರುವ ಡಿ.ಕೆ ಶಿವಕುಮಾರ್, ಕಷ್ಟ ಕಾಲದಲ್ಲಿ ಕಾಪಾಡಿ ಕೈ ಹಿಡಿದು ಮುನ್ನಡೆಸಿದ ದೇವಿಯ ಋಣ ತೀರಿಸಲು ಯಾದಗಿರಿಗೆ ಪಯಣ ಬೆಳೆಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಕಡೆ ದುರ್ಗಾದೇವಿ ಮತ್ತು ಮಾಜಿ ಸಚಿವ ಡಿಕಿ ಶಿವಕುಮಾರ್ ನಡುವೆ ಭಕ್ತಿಯ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತಿದೆ. ತನ್ನ ಕಷ್ಟಗಳನ್ನು ದೂರ ಮಾಡಿದ ಮಾತೆಗೆ ನಮಿಸಲು ಡಿಕೆಶಿ ಕೊನೆಗೂ ಯಾದಗಿರಿಗೆ ಬರುತ್ತಾರೆ. ಈ ಹಿಂದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸುಳಿವು ಮೊದಲೇ ದುರ್ಗಾ ಮಾತೆ ನೀಡಿದ್ದಳು. ಈ ಬೆನ್ನಲ್ಲೇ ದೊಡ್ಡ ಸಂಕಷ್ಟವೊಂದು ಎದುರಾಗಲಿದೆ ಅಂತ ಭವಿಷ್ಯ ನುಡಿದಿದ್ದಳು. ಅದೇ ರೀತಿ ಡಿಕೆಶಿಗೆ ಇಡಿಯ ದೊಡ್ಡ ಸಂಕಷ್ಟ ಎದುರಾಯಿತು.
Advertisement
Advertisement
ಹೀಗಾಗಿ ದೇವಿಯ ಮಹಿಮೆ ಅರಿತ ಡಿಕೆಶಿ, ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಒಂದು ತಿಂಗಳಕಾಲ ಈ ದೇವಸ್ಥಾನದ ಮಹಾದೇವಪ್ಪ ಪೂಜಾರಿಯಿಂದ ವಿಶೇಷ ಪೂಜೆ ಸಹ ಮಾಡಿಸಿ, ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರವನ್ನು ರಕ್ಷಿಸಲು ಮತ್ತು ಆದಾಯ ತೆರಿಗೆ ಪ್ರಕರಣದಲ್ಲಿ ಹೊರ ಬರುವ ಮಾರ್ಗವನ್ನು ಈ ರೀತಿ ಕಂಡುಕೊಂಡಿದ್ದರು.
Advertisement
ಮಹಾದೇವಪ್ಪ ಪೂಜಾರಿ ಕಡೆಯಿಂದ ಒಂದು ತಿಂಗಳ ನಿರಂತರ ಪೂಜೆ ನಡೆಸಿದ ಡಿಕೆಶಿ, ಫೆಬ್ರವರಿ ತಿಂಗಳಲ್ಲಿ ನಡೆಯುವ ಜಾತ್ರೆ ಬರುವುದಾಗಿ ಮಾತು ಕೊಟ್ಟಿದ್ರು. ಆದರೆ ಕೊನೆಯ ಕ್ಷಣದಲ್ಲಿ ಡಿಕೆಶಿ ಬರುವುದನ್ನು ಕ್ಯಾನ್ಸಲ್ ಮಾಡಿಕೊಂಡಿದ್ರು. ಇದಾದ ಕೆಲವೇ ತಿಂಗಳ ಬಳಿಕ ಮೈತ್ರಿ ಸರ್ಕಾರ ಪತನಗೊಂಡು ಡಿಕೆಶಿಗೆ ಇ.ಡಿ ಕಂಟಕ ಎದುರಾಯ್ತು. ಡಿಕೆಶಿ ದೆಹಲಿಯ ತಿಹಾರ್ ಜೈಲಿನಲ್ಲಿ 45 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಇದು ದೇವಿಯ ಮುನಿಸು ಎನ್ನುವುದು ಡಿಕೆಶಿ ಗಮನಕ್ಕೆ ಬಂದಿದೆ ಎನ್ನಲಾಗಿದೆ.
Advertisement
ಡಿಕೆಶಿಯನ್ನು ಇ.ಡಿ ಸಂಕಷ್ಟದಿಂದ ಪಾರು ಮಾಡಲು ಶ್ರಾವಣ ಮಾಸದ ಕೊನೆಯ ಅಮವಾಸ್ಯೆಯ ದಿನ ಶ್ರೀದುರ್ಗಾ ದೇವಿಗೆ ತಡ ರಾತ್ರಿವರೆಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಇ.ಡಿಯ ಬಿಗಿ ಹಿಡಿತದಲ್ಲಿದ್ದ ಡಿಕೆಶಿ ಸಂಕಷ್ಟದಿಂದ ಪಾರು ಮಾಡು ಎಂದು ಮತ್ತೆ ಗೋನಾಲ ದುರ್ಗಾದೇವಿ ಮೊರೆ ಹೋಗಿದ್ರು. ಅಲ್ಲದೆ ಡಿಕೆಶಿ ದೆಹಲಿಯಲ್ಲಿ ತನಿಖೆಗೆ ಒಳಗಾಗುವಷ್ಟು ದಿನ ವಿಶೇಷ ಪೂಜೆ ಸಲ್ಲಿಸುವಂತೆ ದೇವಸ್ಥಾನ ಪೂಜಾರಿಯ ಬಳಿ ಬೇಡಿಕೊಂಡಿದ್ದಾರಂತೆ.
ಇ.ಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಕೂಡಲೇ ಡಿಕೆಶಿ ಮಹಾದೇವಪ್ಪ ಪೂಜಾರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಆಗ ಉಪ ಚುನಾವಣಾ ಪ್ರಚಾರದಲ್ಲಿದ್ದ ಡಿಕೆಶಿ, ಮಹಾದೇವಪ್ಪ ಪೂಜಾರಿಯವರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಯಿಸಿ ತಪ್ಪಿಗೆ ಕ್ಷಮೆ ಕೇಳಿ, ಈ ವರ್ಷದ ಜಾತ್ರೆ ಬರುವುದಾಗಿ ಮತ್ತೆ ಮಾತುಕೊಟ್ಟಿದ್ದರು. ಅದರಂತೆ ಡಿಕೆಶಿ ಇಂದು ಬೆಂಗಳೂರಿನ ಮೂಲಕ ಕಲಬುರಗಿಗೆ ವಿಮಾನದಲ್ಲಿ ಬಂದು, ಕಲಬುರಗಿಯಿಂದ ರಸ್ತೆಯ ಮೂಲಕ ಗೋನಾಲಕ್ಕೆ ಬರಲಿದ್ದಾರೆ. ಸುಮಾರು 7 ತಾಸು ದೇವಿಗೆ ಪೂಜೆ ಸಲ್ಲಿಸಲಿರುವ ಡಿಕೆಶಿ ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಒಟ್ಟಿನಲ್ಲಿ ಕಳೆದ ಬಾರಿ ಕೊಟ್ಟ ಮಾತು ತಪ್ಪಿದ್ದ ಡಿಕೆಶಿ, ಈ ಬಾರಿ ಜಾತ್ರೆಯಲ್ಲಿ ತಾಯಿಯ ಋಣ ತೀರಿಸಲು ಯಾದಗಿರಿಗೆ ಬರುತ್ತಿದ್ದಾರೆ.