ಚಾಮರಾಜನಗರ: ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಸಂಪನ್ಮೂಲದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಎಸ್ಸಿಎಸ್ಪಿ ಟಿಎಸ್ಪಿ ಹಣ 25 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಇದರಿಂದ ಎಸ್‌ಸಿ ಎಸ್‌ಟಿ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಡದೇ ಎಸ್‌ಸಿಎಸ್‌ಪಿ ಟಿಎಸ್ಪಿ ಹಣ ಬಳಸಿದ್ದಾರೆ ಎಂದು ಕಿಡಿಕಾರಿದರು.
ಎಸ್ಸಿಎಸ್ಟಿ ಸಮುದಾಯಕ್ಕೆ ಮನೆ ಹೇಗೆ ನಿರ್ಮಿಸಿಕೊಡ್ತೀರಿ? ಮಕ್ಕಳಿಗೆ ಸ್ಕಾಲರ್‌ಶಿಪ್ ಹಣ ಎಲ್ಲಿಂದ ನೀಡ್ತೀರಿ. ಎಸ್ಸಿಎಸ್ಟಿ ಮಕ್ಕಳು ಉನ್ನತ ಶಿಕ್ಷಣ ಪಡೆಯೋದು ಹೇಗೆ? ಗಂಗಾ ಕಲ್ಯಾಣ ಯೋಜನೆ ಹೇಗೆ ಅನುಷ್ಠಾನ ಮಾಡ್ತೀರಿ? ಸಮುದಾಯ ಭವನ, ರಸ್ತೆ ಹೇಗೆ ಮಾಡ್ತೀರಿ? ಎಸ್ಸಿಎಸ್ಪಿ ಟಿಎಸ್ಪಿ ಅನುದಾನ ಶಾಸನಬದ್ಧ ಹಕ್ಕು. ಇದಕ್ಕಾಗಿ ನಾವು ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಮುಂದಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಅನುದಾನ ಮೀಸಲಿಡಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು. ನಮ್ಮ ಪಾಲು ನಮಗೆ ಸಿಗಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರದ ವಿದ್ಯಾಮಾನ ಕರ್ನಾಟಕದಲ್ಲಿ ಘಟಿಸಬಹುದು. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತೆ. ಯಾವ ರೀತಿ ಮಹಾರಾಷ್ಟ್ರದಲ್ಲಿ ಏಕನಾಥ್ ಸಿಂಧೆ ಫಿನಾಮಿನ ಆಯ್ತೋ ಅದೇ ರೀತಿ ಕರ್ನಾಟಕದಲ್ಲೂ ಆಗಬಹುದು. ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರನ್ನು ಯಾವ ರೀತಿ ಇಳಿಸಲಾಯಿತು ಎಂಬುದನ್ನು ನೋಡಿದ್ದೇವೆ. ಈ ಸರ್ಕಾರ ಇರುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ ಎಂದರು.