ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಮಾಜಿ (BJP) ಶಾಸಕ ಸಿ.ಎಂ ನಿಂಬಣ್ಣವರ್ (77) (CM Nimbannavar) ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಲಘಟಗಿ (Kalaghatgi) ಕ್ಷೇತ್ರದ ಮಾಜಿ ಶಾಸಕರಾಗಿದ್ದ ಅವರು, ಕಾಲು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬೆಳಗ್ಗೆ 11:10 ರ ಸಮಯಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಾರ್ಥಿವ ಶರೀರವನ್ನು ಕಲಘಟಗಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ
Advertisement
ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಅವರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು.
Advertisement
Advertisement
ಇಂಗ್ಲಿಷ್ ವಿಷಯದಲ್ಲಿ ಬಿಎ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಹಾಗೂ ಎಲ್‍ಎಲ್‍ಬಿ ಪದವಿಗಳನ್ನು ಅವರು ಪಡೆದಿದ್ದರು. ಅಲ್ಲದೇ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿಯನ್ನೂ ಪಡೆದಿದ್ದ ಅವರು ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿರುವ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ 1970ರಲ್ಲಿ ಇಂಗ್ಲಿಷ್ ಶಿಕ್ಷಕರಾಗಿದ್ದರು. ಬಳಿಕ ಇಲ್ಲಿಯೇ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ್ದರು. ಮುಂದೆ ಇದೇ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರಿಗೆ ಶಿಕ್ಷಣ ಇಲಾಖೆಯಿಂದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಸಹ ಲಭಿಸಿತ್ತು. 10 ವರ್ಷಗಳ ಸೇವಾವಧಿ ಬಾಕಿ ಇರುವಾಗಲೇ (1994 ಸೆಪ್ಟೆಂಬರ್ 30ರಂದು) ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.
Advertisement
ಬಳಿಕ ವಕೀಲ ವೃತ್ತಿಯನ್ನು ಆರಂಭಿಸಿದ್ದ ಅವರು, ಕಲಘಟಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಅನೇಕ ಮೊಕದ್ದಮೆಗಳನ್ನು ಕೈಗೆತ್ತಿಕೊಂಡು ರಾಜಿ ಮೂಲಕ ಬಗೆಹರಿಸಿದ್ದರು. ಇದು ಅವರಿಗೆ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ವಕೀಲರ ಸಂಘದ ಅಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿದ್ದರು. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಿ.ಎಂ. ನಿಂಬಣ್ಣವರ್ 1995ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 27 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದ ಅವರು, ಕಲಘಟಗಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯನ್ನು ಮಾಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇವರು ಗೆಲುವು ಸಾಧಿಸಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಇವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಲಿ ಶಾಸಕರಾಗಿದ್ದರೂ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಕೆಲವೇ ತಿಂಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಾಗರಾಜ ಛಬ್ಬಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಆದರೆ ಅವರು ಈ ಬಾರಿ ಸೋಲು ಕಂಡಿದ್ದರು. ತಮಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಸಿ.ಎಂ. ನಿಂಬಣ್ಣವರ್ ಹಲವಾರು ಬಾರಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಚಿಕ್ಕೋಡಿಯ ಜೈನಮುನಿ ಹತ್ಯೆ ಖಂಡನೀಯ – ಸಮಗ್ರ ತನಿಖೆ ಆಗಲಿ: ಕಟೀಲ್ ಒತ್ತಾಯ
Web Stories