ಬೆಂಗಳೂರು: ಎಚ್.ವಿಶ್ವನಾಥ್ ನಮ್ಮ ಪಕ್ಷದವರಲ್ಲ, ಜೆಡಿಎಸ್‍ನವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ವಿರುದ್ಧ ಟ್ವೀಟ್ ಮೂಲಕ ಗುಡುಗಿರುವ ಮಾಜಿ ಸಿಎಂ, ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಮನವ್ಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ಹೆಚ್.ವಿಶ್ವನಾಥ್ ಅವರು ನಮ್ಮ ಪಕ್ಷದವರಲ್ಲ, ಜೆಡಿಎಸ್ ಪಕ್ಷದವರು. ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇನೆ.@INCKarnataka
— Siddaramaiah (@siddaramaiah) May 22, 2019
Advertisement
ನನ್ನದು ಹಳ್ಳಿ ಭಾಷೆ ಮತ್ತು ನೇರ ನುಡಿ. ಸ್ವಾಭಿಮಾನಿಯಾದವರು ಮತ್ತು ಪ್ರಾಮಾಣಿಕರು ಮಾತ್ರ ನೇರ ನಿಷ್ಠುರ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ ಇದು ಕೆಲವು ಸೋಗಲಾಡಿ ವ್ಯಕ್ತಿತ್ವದವರಿಗೆ ಅಹಂಕಾರದಂತೆ ಕಾಣುತ್ತದೆ. ನಾವು ಜನಪರ ಮತ್ತು ಬಡವರ ಪರವಾಗಿರುವುದರಿಂದ ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ನೃಪತುಂಗ ವಾಣಿಜ್ಯ-ಕಲಾ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟನೆ ಮಾಡಿದರು. ಈ ವೇಳೆ ಮಾಧ್ಯಮಗಳು ಹತ್ತಿರಕ್ಕೆ ಹೋಗುತ್ತಿದ್ದಂತೆ ‘ನೋ ಪ್ರೆಸ್ ಮೀಟ್’ ಎಂದು ತೆರಳಿದರು. ಹೀಗಾಗಿ ಟ್ವೀಟ್ ಮೂಲಕ ವಿಶ್ವನಾಥ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
Advertisement
ಎಚ್.ವಿಶ್ವನಾಥ್ ಹೇಳಿದ್ದೇನು?:
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೋಳೂರು ಬಳಿ ಇರುವ ಗಟ್ಟಹಳ್ಳಿ ಆಂಜನಪ್ಪ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‍ನ ಕಿರುಕುಳ ತಡೆದುಕೊಳ್ಳುವ ಶಕ್ತಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಇದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಚಿರಾಯುವಾಗಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರವೂ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ನಾನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷದ ಅಧ್ಯಕ್ಷನಾಗಿ, ನನ್ನ ಇತಿಮಿತಿಯೊಳಗೆ ಸರ್ಕಾರದ ಜವಾಬ್ದಾರಿಯನ್ನ ನೆನಪು ಮಾಡುತ್ತಿದ್ದೆನೆಯೇ ಹೊರತು ನನಗೂ ಸಿದ್ದರಾಮಯ್ಯ ಅವರಿಗೆ ವೈಯುಕ್ತಿಕವಾಗಿ ಏನೂ ಇಲ್ಲ ಎಂದು ಹೇಳಿದ್ದರು.