ದಯವಿಟ್ಟು ಅತಿಥಿ ಶಾಸಕರಾಗ್ಬೇಡಿ ಎಂದ ಸಾಮಾಜಿಕ ಕಾರ್ಯಕರ್ತ- ಮಾಜಿ ಸಿಎಂ ಪ್ರತ್ಯುತ್ತರ

Public TV
2 Min Read
CM TWEET

ಬಾಗಲಕೋಟೆ: ಅತಿಥಿ ಶಾಸಕರಾಗಬೇಡಿ, ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ. ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂಬ ಬಾದಾಮಿಯ ಸಾಮಾಜಿಕ ಕಾರ್ಯಕರ್ತನ ಟ್ವೀಟ್ ಗೆ ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ರೀಟ್ವೀಟ್ ಮಾಡಿದ್ದಾರೆ.

ಇಷ್ಟಲಿಂಗ ನರೇಗಲ್ ಸಾಮಾಜಿಕ ಕಾರ್ಯಕರ್ತ ಎರಡು ದಿನಗಳ ಹಿಂದೆ ಕ್ಷೇತ್ರಕ್ಕೆ ಬರುವಂತೆ ಮಾಜಿ ಸಿಎಂಗೆ ಟ್ವೀಟ್ ಮೂಲಕ ಒತ್ತಾಯಿಸಿದ್ದರು. ಅಲ್ಲದೆ ಅಥಿತಿ ಶಾಸಕರಾಗಬೇಡಿ ಎಂದು ಟ್ವೀಟ್ ನಲ್ಲಿ ಟಾಂಗ್ ನೀಡಿದ್ದರು. ಸದ್ಯ ಸಾಮಾಜಿಕ ಕಾರ್ಯಕರ್ತನ ಟ್ವೀಟ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳ ಮಾಹಿತಿ ಸಮೇತ ರೀಟ್ವೀಟ್ ಮಾಡುವ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.

“ನಾನು ಬಾದಾಮಿಯ ಶಾಸಕನಾಗಿ ಆಯ್ಕೆಯಾದ ನಂತರದಲ್ಲಿ ಕಳೆದ ಒಂದು ವರ್ಷದಿಂದ ಸುಮಾರು 50ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಕ್ಷೇತ್ರದ ಜನರ ಜೊತೆಗಿನ ಸಂಪರ್ಕವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಬಾದಾಮಿ ಪಟ್ಟಣದಲ್ಲಿ ಗೃಹ ಕಚೇರಿಯನ್ನು ಸಹ ಆರಂಭಿಸಿದ್ದೇನೆ” ಎಂದು ಮೊದಲ ಟ್ವೀಟ್ ಫೋಟೋ ಹಾಕುವ ಮೂಲಕ ಅಭಿವೃದ್ಧಿ ಬಗ್ಗೆ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಬಾದಾಮಿ ಕ್ಷೇತ್ರ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಯೋಜನೆಗಳನ್ನು ಕಂಡಿದೆ. ನೀರಾವರಿ, ರಸ್ತೆ, ಪ್ರವಾಸೋದ್ಯಮ, ಮೂಲ ಸೌಲಭ್ಯ ಅಭಿವೃದ್ಧಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಒಂದೇ ವರ್ಷದ ಅವಧಿಯಲ್ಲಿ ರೂ.1,300 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆಯುತ್ತಿದೆ. ಸಾಧನೆಯ ಬಗ್ಗೆ ತುತ್ತೂರಿ ಊದುವುದು ನನ್ನ ಜಾಯಮಾನವಲ್ಲ. ಶಾಸಕನಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಇದು ಕ್ಷೇತ್ರದ ಮತದಾರರಿಗೆ ತಿಳಿದಿದೆ. ಈ ಬಗ್ಗೆ ರಾಜಕೀಯ ವಾಗ್ವಾದ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಹೇಳಿದ್ದೇನು?
“ಸಿದ್ದರಾಮಯ್ಯ ಅವರೇ ಬಾದಾಮಿ ಕ್ಷೇತ್ರಕ್ಕೆ ಯಾವಾಗ ಭೇಟಿ ಕೊಡುತ್ತೀರಿ ಎಂದು ನಮ್ಮ ಜನರು ಕಾಯುತ್ತಿದ್ದಾರೆ. ಬರ ವೀಕ್ಷಣೆ ಇಲ್ಲ, ದನಕುರುಗಳಿಗೆ ನೀರು, ಮೇವು ಇಲ್ಲ, ಜನತಾ ದರ್ಶನ ಇಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ. ನೀವು 15 ದಿನವಾದರೂ ಬಾದಾಮಿಯಲ್ಲಿ ಇರಿ ಸಾಹೇಬರೇ. ನೀವಿದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ. ದಯವಿಟ್ಟು ಅತಿಥಿ ಶಾಸಕರಾಗಬೇಡಿ” ಎಂದು ಸಾಮಾಜಿಕ ಕಾರ್ಯಕರ್ತ ಇಷ್ಟಲಿಂಗ ನರೇಗಲ್ ಟ್ವೀಟ್ ಮಾಡಿದ್ದರು.

CM

Share This Article
Leave a Comment

Leave a Reply

Your email address will not be published. Required fields are marked *