ಬೆಂಗಳೂರು: ಈ ಬಾರಿಯ ಲೋಕಸಮರದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಮಂಡ್ಯ ಕ್ಷೇತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಅವರನ್ನು ಮನವೊಲಿಸಲು ಬಿಜೆಪಿ ರಣತಂತ್ರ ಹೂಡುತ್ತಿದೆ.
ಸುಮಲತಾ ವಿರುದ್ಧ ಬಿಜೆಪಿ ಸ್ಪರ್ಧೆ ಮಾಡುವುದು, ಬಿಡುವುದು ಬೇರೆ ವಿಚಾರವಾಗಿದೆ. ಆದ್ರೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಇಂದು ಮಹತ್ವದ ಸಭೆ ಕರೆದಿದ್ದು, ಮಂಡ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಅವರು ಮಂಡ್ಯ ರಣಕಣದ ಕುರಿತು ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.
ಸುಮಲತಾ ಅವರನ್ನು ಮನವೊಲಿಸುವ ಕೆಲಸವನ್ನು ಮಾಜಿ ಡಿಸಿಎಂ ಆಗಿರುವ ಆರ್ ಅಶೋಕ್ ಹೆಗಲಿಗೆ ನೀಡಲಿದ್ದಾರೆ. ಒಂದು ವೇಳೆ ಸುಮಲತಾ ಅವರು ಪಕ್ಷೇತರರಾಗಿ ನಿಂತರೆ ಅವರಿಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುವ ಪ್ಲಾನ್ ಕೂಡ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಬಿಎಸ್‍ವೈ ಇಂದು ನಡೆಸುವ ಸಭೆಯ ಬಗ್ಗೆ ರಾಜ್ಯ ನಾಯಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.
ಇತ್ತ ಸುಮಲತಾ ಅವರು ಇಂದು ಕೂಡ ಮಂಡ್ಯದಲ್ಲಿ ಕ್ಷೇತ್ರ ಪ್ರವಾಸ ಮಾಡಲಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಕೋಡಿಶೆಟ್ಟಿಪುರದ ಮಾರಮ್ಮನ ದೇವಾಲಯ ಪುನರ್ ಪ್ರತಿಷ್ಠಾಪನೆ ಹಾಗೂ ನವಗ್ರಹ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಒಂದು ತಿಂಗಳಿಂದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ನೆಪದಲ್ಲಿ ಅವರು ಕೈ ಮುಂಡರನ್ನ ಭೇಟಿ ಮಾಡುತ್ತಿದ್ದಾರೆ.
ನಾಗಮಂಗಲ ತಾಲೂಕಿನಲ್ಲೂ ಸುಮಲತಾ ಇಂದು ಸಂಚಾರ ಮಾಡಲಿದ್ದು, ಗಂಗವಾಡಿ, ಟಿ.ಚನ್ನಾಪುರ, ತೆಂಗಿನಭಾಗ ಗ್ರಾಮಗಳಿಗೆ ತೆರಳಲಿದ್ದಾರೆ. ಗ್ರಾಮದ ಜಾತ್ರಾ ಮಹೋತ್ಸವದಲ್ಲೂ ಭಾಗಿಯಾಗಲಿದ್ದಾರೆ. ಈ ಮೂಲಕ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv