ಚಿತ್ರದುರ್ಗ: ಕರ್ನಾಟಕದ ಏಕೀಕರಣದ ರೂವಾರಿ ಮಾಜಿ ಸಿಎಂ ದಿ.ಎಸ್.ನಿಜಲಿಂಗಪ್ಪನವರ (S. Nijalingappa) ನಿವಾಸವನ್ನು ಸರ್ಕಾರ ಖರೀದಿಸಿ ಒಂದು ವರ್ಷ ಕಳೆದಿದೆ. ಹೀಗಾಗಿ ಇನ್ಮೇನು ಸ್ಮಾರಕ ಆಗಿಯೇಬಿಡ್ತು ಎಂದು ಎಲ್ಲರು ಭಾವಿಸಿದ್ದರು. ಆದರೆ ಆ ಕಾಮಗಾರಿ ಮಾತ್ರ ಟೇಕ್ ಆಫ್ ಆಗಿಲ್ಲ ಅಂತ ಎಸ್‌ಎನ್ ಒಡನಾಡಿಗಳು ಹಾಗೂ ಕೋಟೆನಾಡಿನ ಜನರು ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದುರ್ಗ (Chitradurga) ನಗರದ ವಿಪಿ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪನವರು ವಾಸವಾಗಿದ್ದ ‘ವಿನಯ’ ಎಂಬ ನಿವಾಸವಿದೆ. ಈ ಮನೆಯನ್ನು ಈಗಾಗಲೇ ಸರ್ಕಾರ ಸ್ಮಾರಕ ಮಾಡುವುದಾಗಿ ನಿಯಮಾನುಸಾರ ಖರೀದಿಸಿದ್ದು, ಸರ್ಕಾರದಿಂದ ಅನುದಾನ ಕೂಡ ಮೀಸಲಿಡಲಾಗಿತ್ತು. ಆದರೆ ಈವರೆಗೆ ಸ್ಮಾರಕದ ಕಾಮಗಾರಿ ಮಾತ್ರ ಆರಂಭಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಎಸ್.ನಿಜಲಿಂಗಪ್ಪನವರ ಒಡನಾಡಿಗಳು ಹಾಗೂ ಬೆಂಬಲಿಗರು ಅಸಮಧಾನ ಹೊರಹಾಕಿದರು. ಕೂಡಲೇ ಕಾಮಗಾರಿ ಆರಂಭಿಸಬೇಕು. ಎಸ್‌ಎನ್ ವಾಸದ ವೇಳೆ ಇದ್ದ ಮಾದರಿಯಲ್ಲಿ ಈ ಮನೆಯನ್ನು ಸಜ್ಜುಗೊಳಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬುದು ಎಸ್.ಎನ್ ಒಡನಾಡಿಯಾದ ಷಣ್ಮುಖಪ್ಪ ಅವರ ಆಗ್ರಹ.
ಇನ್ನು ಈ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನು ಕೇಳಿದ್ರೆ, ಎಸ್.ಎನ್ ಅವರ ನಿವಾಸದ ಮೂಲ ಕಟ್ಟಡವನ್ನು ಸುಣ್ಣ, ಬೆಲ್ಲ, ಅಲೋವೆರ ಮಿಶ್ರಣದಿಂದ ತಯಾರಾದ ಗಾರೆ ಹಾಗೂ ಮಣ್ಣನ್ನು ಬಳಸಿ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಹೆಚ್ಚಿನ ಸಮಯವಾಗಲಿದೆ. ಹೀಗಾಗಿ ಪುರಾತತ್ವ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದವರೊಂದಿಗೆ ಚರ್ಚಿಸಿದ್ದು, 1.20 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲು ಪಾರಂಪರಿಕ ಸ್ಪರ್ಶ ನೀಡಲಾಗುತ್ತಿದೆ. ತ್ವರಿತವಾಗಿ ಕಟ್ಟದ ನವೀಕರಣ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಾಮಗಾರಿಗೆ ಈಗಾಗಲೇ 84 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಜೊತೆಗೆ ವರದಿ ಪರಿಶೀಲಿಸಿ, ಪತ್ರ ಬರೆದು ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಕೋರಿಕೆ ಸಹ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಒಟ್ಟಾರೆ ಚಿತ್ರದುರ್ಗ ಜಿಲ್ಲಾಡಳಿತ ವಿರುದ್ಧ ಕೋಟೆನಾಡಿನ ಜನರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಚಿತ್ರದುರ್ಗ ಜಿಲ್ಲಾಡಳಿತ ತ್ವರಿತವಾಗಿ ಕಾಮಗಾರಿ ಮುಗಿಸಿ, ಈ ಸ್ಮಾರಕವನ್ನು ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಲು ಮುಂದಾಗಬೇಕೆಂಬುದು ಸಾರ್ವಜನಿಕರ ಆಶಯ.

