ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ ವರ್ಗಾವಣೆಯಾಗಿದ್ದು ಹೇಗೆ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

Public TV
2 Min Read
hd kumaraswamy

– ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‌ಆರ್‌ ಕಥೆ
– ವರ್ಗಾವರ್ಗಿ ಬಜೆಟ್‌ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ

ಬೆಂಗಳೂರು: ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ಪೊಲೀಸ್‌ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಒಂದು ಸರ್ಕಾರ ವಿಸ್ಮಯಗಳ ಆಗರ. ಅಬ್ಬಬ್ಬಾ. ಬಾಯಿ ತೆರೆದರೆ ಭಗವದ್ಗೀತೆ. ನಾಲಿಗೆ ಮೇಲೆ ನೈತಿಕತೆಯ ನಾಟ್ಯ. ಮಾತು ಮಾತಿನಲ್ಲೂ ಮೌಲ್ಯಗಳದ್ದೇ ಮಥನ ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ. ಥೂ.. ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

 

ಪೋಸ್ಟ್‌ನಲ್ಲಿ ಏನಿದೆ?
ಡೂಪ್ಲಿಕೇಟ್‌ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‌ಆರ್‌ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ.

ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ ‘ಸುಲಿಗೆಪುತ್ರ’ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ?

 

ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ. ‘ಕಾಸಿಗಾಗಿ ಹುದ್ದೆ ಮತ್ತು ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ ಹೇಗಿದೆ?

ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ ಆಂಡ್‌ ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ.

Share This Article