ಮಡಿಕೇರಿ: ಹಲವರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿದ ಒಂಟಿ ಸಲಗವನ್ನು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮೋದೂರು ಎಸ್ಟೇಟ್ ನಲ್ಲಿ ತಿರುಗಾಡುತ್ತಿದ್ದ ಒಂಟಿ ಸಲಗನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಗಿತ್ತು. ಆದರೆ ಮೊದಲ ದಿನ ಕಾರ್ಯಾಚರಣೆ ಪಡೆಯ ಕಣ್ಣಿಗೆ ಕಾಣಿಸಿಕೊಳ್ಳದೆ ಈ ಸಲಗ ಅಡಗಿಕೊಂಡಿತ್ತು.
Advertisement
ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಸಾಕಾನೆಗಳಾದ ಹರ್ಷ, ವಿಕ್ರಂ ಮತ್ತು ಜ್ಯೋತಿ. ಜೊತೆಗೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗು ಕೃಷ್ಣರನ್ನು ಸೋಮವಾರ ಬೆಳಗ್ಗೆಯೇ ಮೋದೂರು ಎಸ್ಟೇಟ್ ಗೆ ತರಲಾಗಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಆನೆಯನ್ನು ಸೋಮವಾರ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಾಲ್ಕು ದಿನಗಳ ನಂತರ ಕಾಫಿ ತೋಟದ ಒಳಗೆ ಒಂಟಿ ಸಲಗನನ್ನು ಪತ್ತೆ ಹಚ್ಚಲಾಯಿತು.
Advertisement
ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ಅರವಳಿಕೆ ಮದ್ದು ನೀಡಿದರು. ಬಳಿಕ ಸಾಕಾನೆಗಳು ಸುತ್ತುವರಿದಾಗ ಅವುಗಳ ನೆರವಿನಿಂದ ಸಿಬ್ಬಂದಿ ಸಲಗನನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ನಂತರ ಅದನ್ನು ದುಬಾರೆ ಶಿಬಿರಕ್ಕೆ ಸಾಗಿಸಲಾಯಿತು. ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಮಂಜುನಾಥ್ ಮತ್ತು ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಪಾಲ್ಗೊಂಡಿದ್ದರು.
Advertisement
ಸಲಗನ ಸೆರೆಯಿಂದಾಗಿ ಮೋದೂರು ವಿಭಾಗದ ನಿವಾಸಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವರ ಮೇಲೆ ದಾಳಿ ನಡೆಸಿ ಸಲಗ ಗಾಯಗೊಳಿಸಿತ್ತು. ಈ ಭಾಗದಲ್ಲಿ ವಾಹನಗಳ ಮೇಲೂ ದಾಳಿ ನಡೆಸಿತ್ತು. ಇದರಿಂದ ಜನರು ಆತಂಕದಿಂದ ಹೊರಗೆ ಹೋಗುತ್ತಿರಲಿಲ್ಲ. ಕಾಫಿ ತೋಟಗಳಿಗೆ ಬರಲು ಕಾರ್ಮಿಕರು ಹಿಂಜರಿಯುತ್ತಿದ್ದರು. ಇದೀಗ ಒಂಟಿ ಸಲಾಗವನ್ನು ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ.