ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

Public TV
3 Min Read
bommai 7 e1632736843780

– ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳಿಗೆ ಎನ್‍ಡಿಎ ಮಾದರಿ ತರಬೇತಿ
– ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ
– ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ
– ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ

ಹುಬ್ಬಳ್ಳಿ: ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್‍ಎಸ್‍ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

bommai 1 4

ಹುಬ್ಬಳ್ಳಿಯಲ್ಲಿಂದು ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ, ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಛೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಎನ್‍ಡಿಎ ಮಾದರಿ ತರಬೇತಿ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಪುಣೆಯ ಕಡಕ್‍ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‍ಡಿಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

bommai 2 3

ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. 16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕಾತಿ ಮಾಡಲಾಗುತ್ತಿದೆ ಎಂದರು. ಡಿವೈಎಸ್‍ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ, ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿನ ಜನ ಶಾಂತಿ ಪ್ರಿಯರು ಕೆಲವು ಕಿಡಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು ಎಂದರು. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವಿದೆ ಎಂದು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡ್ತಾರೆ: ಹಾಲಪ್ಪ ಆಚಾರ್

bommai 2 2

ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ. 10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬೊಮ್ಮಯಿ ತಿಳಸಿದರು.

ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ ಆಗಿದೆ. ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಜೂಜಾಟ, ಆನ್ ಲೈನ್ ಜೂಜುಕಾರನ್ನು ಜೈಲಿಗೆ ತಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

mysuru araga jnanendra

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, 2015 ರಿಂದ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಇಂದು ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ನೂತನ ಕಟ್ಟಡಗಳಿಗೆ ಭೂಮಿಪೂಜೆಯನ್ನು ಮುಖ್ಯಮಂತ್ರಿಯವರು ನೆರವೇರಿಸಿದ್ದಾರೆ ಇದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ನಮ್ಮ ಹಾಜರಿ ಕ್ಯಾಂಟೀನ್‍ನಲ್ಲೇ ಹೆಚ್ಚಾಗಿರುತ್ತಿತ್ತು ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ

ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *