LatestLeading NewsMain PostNational

ಪತಿಗೆ ತಿಳಿಸದೇ ಮಾಡಿದ್ದ 8 ಲಕ್ಷ ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ್ಲು

ತಿರುವನಂತಪುರಂ: ಪತಿಗೆ ತಿಳಿಸದೇ ಮಾಡಿದ್ದ ಸಾಲ ತೀರಿಸಲು ಮಹಿಳೆಯೊಬ್ಬರು ತನ್ನ ತಂದೆ-ತಾಯಿಗೆ ವಿಷ ಹಾಕಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

ತ್ರಿಶೂರ್‌ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದ್ದು, ಇಂದುಲೇಖಾ (39) ತನ್ನ ತಂದೆ-ತಾಯಿಗೆ ವಿಷ ಹಾಕಿದ ಮಹಿಳೆ. ಈಕೆ ತನ್ನ ತಂದೆ ಚಂದ್ರನ್‌ ಹಾಗೂ ತಾಯಿ ರುಕ್ಮಿಣಿ ಅವರಿಗೆ ಕುಡಿಯಲು ಕೊಟ್ಟಿದ್ದ ಟೀನಲ್ಲಿ ಇಲಿ ಪಾಷಾಣ ಹಾಕಿದ್ದಳು. ಟೀ ಕುಡಿದು ತಾಯಿ ಮೃತಪಟ್ಟರೆ, ರುಚಿಯಲ್ಲಿ ವ್ಯತ್ಯಾಸ ಕಂಡ ತಂದೆ ಅದನ್ನು ಕುಡಿಯದೇ ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

ಏನಿದು ಪ್ರಕರಣ?
ದುಬೈನಲ್ಲಿ ಕೆಲಸ ಮಾಡುತ್ತಿರುವ ಪತಿಗೆ ತಿಳಿಸದೆಯೇ ಇಂದುಲೇಖಾ ಆಭರಣಗಳನ್ನು ಒತ್ತೆ ಇಟ್ಟು 8 ಲಕ್ಷ ರೂ. ಸಾಲ ಪಡೆದಿದ್ದರು. ಪತಿ ರಜೆ ಮೇಲೆ ಊರಿಗೆ ಬರುತ್ತಿದ್ದುದನ್ನು ತಿಳಿದು, ಸಾಲ ತೀರಿಸಲು ದಿಕ್ಕು ತೋಚಿಲ್ಲ. ಪತಿ ಬರುವಷ್ಟರಲ್ಲಿ ಹೇಗಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ ಇಂದುಲೇಖಾ ಕಣ್ಣಿಗೆ ಬಿದ್ದಿದ್ದು ಆಕೆಯ ತಂದೆ-ತಾಯಿ. ಪೋಷಕರ ಆಸ್ತಿಯನ್ನು ಮಾರಿ ಸಾಲ ತೀರಿಸಲು ಮುಂದಾಗಿದ್ದಳು.

ಪೋಷಕರಿಗೆ ಟೀಯಲ್ಲಿ ಇಲಿ ಪಾಷಾಣ
ತನ್ನ ಪೋಷಕರನ್ನು ಕೊಲ್ಲಲು ಇಂದುಲೇಖಾ ನಿರ್ಧರಿಸಿದ್ದಾಳೆ. ನಂತರ ಅವರಿಗೆ ಕುಡಿಯಲು ಕೊಟ್ಟಿದ್ದ ಟೀಯಲ್ಲಿ ಇಲಿ ಪಾಷಾಣ ಬೆರೆಸಿದ್ದಾಳೆ. ಟೀಯನ್ನು ತಾಯಿ ಕುಡಿದಿದ್ದಾರೆ. ಆದರೆ ಟೀ ರುಚಿಯಲ್ಲಿ ಕಹಿ ಅನುಭವವಾಗಿ ಆಕೆ ತಂದೆ ಒಂದು ಗುಟುಕನ್ನಷ್ಟೇ ಕುಡಿದು ಸುಮ್ಮನಾಗಿದ್ದಾರೆ.

ಟೀ ಕುಡಿದ ಇಂದುಲೇಖಾ ತಾಯಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ಕಾರಣದ ಬಗ್ಗೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಪೊಲೀಸರು ಬುಧವಾರ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ವಿಚಾರಣೆ ವೇಳೆ ಚಂದ್ರನ್ ಅವರು ತಮ್ಮ ಮಗಳು ನೀಡಿದ ಚಹಾವನ್ನು ಕುಡಿದು ಪತ್ನಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರುಚಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಭವಿಸಿದ ಅವರು ಚಹಾವನ್ನು ಕುಡಿಯಲಿಲ್ಲ. ಚಂದ್ರನ್ ಅವರು ತಮ್ಮ ಪತ್ನಿಯ ಸಾವಿನಲ್ಲಿ ಅವರ ಹಿರಿಯ ಮಗಳು ಇಂದುಲೇಖಾ ಪಾತ್ರದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದರು.

ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?
ವಿಚಾರಣೆ ವೇಳೆ ಇಂದುಲೇಖಾ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಗೂಗಲ್‌ ಸರ್ಚಿಂಗ್‌ ಹಿಸ್ಟರಿ ಪರಿಶೀಲಿಸುವಾಗ, ʼಜನರಿಗೆ ವಿಷ ಹಾಕಿ ಸಾಯಿಸುವುದು ಹೇಗೆʼ ಎಂದು ಸರ್ಚ್‌ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿದಾಗ, ಆಕೆ ತನ್ನ ಪೋಷಕರಿಗೆ ನೀಡಿದ ಚಹಾದಲ್ಲಿ ಇಲಿ ಪಾಷಾಣ ಹಾಕಿದ್ದನ್ನು ಒಪ್ಪಿಕೊಂಡಿದ್ದಾಳೆ. ಚಹಾ ಕುಡಿದು ಕುಸಿದು ಬಿದ್ದ ರುಕ್ಮಿಣಿಯನ್ನು ಇಂದುಲೇಖಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆಸ್ತಿ ಪಡೆಯಲು ಪೋಷಕರನ್ನು ಕೊಂದು ಹಾಕಲು ಯತ್ನಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

Live Tv

Leave a Reply

Your email address will not be published. Required fields are marked *

Back to top button