ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗುಳಿ ಗ್ರಾಮಸ್ಥರು ಕುಡಿಯಲು ನೀರು ಕೇಳಿದ್ರೆ ಮಜ್ಜಿಗೆ ಕೊಡುತ್ತಾರೆ. ಕಾರಣ ಗ್ರಾಮದ ಪ್ರತಿಯೊಬ್ಬರು ಹೈನುಗಾರಿಕೆಯನ್ನು ಉದ್ಯೋಗ ಮಾಡಿಕೊಂಡಿದ್ದಾರೆ. ಆದ್ರೆ ಕಳೆದ ಕೆಲ ದಿನಗಳಿಂದ ಜೀವನಾಧಾರವಾದ ಹಸುಗಳು ಕಾಲು, ಬಾಯಿ ಬೇನೆಯಿಂದ ಸಾವನ್ನಪ್ಪುತ್ತಿವೆ. ನಮ್ಮ ಕಷ್ಟ ಕೇಳಬೇಕಾದ ಶಾಸಕರು ಗುರುಗ್ರಾಮದ ರೆಸಾರ್ಟ್ ನಲ್ಲಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಗುಳಿ ಗ್ರಾಮದಲ್ಲಿ ಸರಿ ಸುಮಾರು 3 ಸಾವಿರಕ್ಕೂ ಅಧಿಕ ಹಸುಗಳಿವೆ. ಇಲ್ಲಿನ ರೈತರ ಮೂಲ ಉದ್ಯೋಗವೆಂದರೆ ಅದು ಹೈನುಗಾರಿಕೆಯಾಗಿದ್ದು, ಅದನ್ನೆ ಉಸಿರಾಗಿಸಿಕೊಂಡು ಇಲ್ಲಿನ ರೈತರು ಬದುಕುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಹಸುಗಳಿಗೆ ಕಾಲು ಬೇನೆ ಮತ್ತು ಬಾಯಿ ಬೇನೆ ಬಂದು ಸುಮಾರು 15 ಕ್ಕೂ ಹೆಚ್ಚು ಹಸುಗಳು ಅಸುನೀಗಿವೆ. ಹೀಗಾಗಿ ಇಲ್ಲಿನ ರೈತರಿಗೆ ಹಸುಗಳನ್ನ ಕಾಪಾಡಿಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ನಮ್ಮ ಕಷ್ಟವನ್ನ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಗಣಪತಿ ಬಡಿಗೇರ್ ಹೇಳುತ್ತಾರೆ.
ಗ್ರಾಮದ ರೈತರ ವತಿಯಿಂದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು ಇಲ್ಲಿಯವರೆಗೂ ಗ್ರಾಮದಲ್ಲಿ ಪಶು ಆಸ್ಪತ್ರೆ ಆಗಿಲ್ಲ. ಹೀಗಾಗಿ ಇಲ್ಲಿನ ರೈತರು ತಮ್ಮ ಹಸುಗಳನ್ನ ದೂರದ ಚಿಕ್ಕೋಡಿ ಅಥವಾ ಇಲ್ಲವೇ ಅಕ್ಕ ಪಕ್ಕದ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಅಗತ್ಯ ಎದುರಾಗಿದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯ ಉಪನಿರ್ದೆಶಕರನ್ನ ಕೇಳಿದ್ರೆ ಸರ್ಕಾರಕ್ಕೆ ನಾವು ಸಹ ಪ್ರಸ್ತಾವನೆ ಕಳಿಸಿದ್ದೇವೆ ಆದರೆ ಸರ್ಕಾರ ಹೊಸ ಚಿಕಿತ್ಸಾಲಯಗಳನ್ನು ತೆರೆಯುವ ಮನಸ್ಸು ಮಾಡುತ್ತಿಲ್ಲ. ಬದಲಾಗಿ ಈಗಾಗಲೇ ಇದ್ದ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡುತ್ತಿದೆ ಚಿಕ್ಕೋಡಿ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ಡಾ.ಸದಾಶಿವ ಉಪ್ಪಾರ ಹೇಳುತ್ತಾರೆ.
ಅವಶ್ಯಕತೆ ಇರುವ ಜಾಗಗಳಲ್ಲಿ ಹೊಸ ಪಶು ಚಿಕಿತ್ಸಾಲಯ ತೆರೆಯೋದು ಬಿಟ್ಟು ಈಗಾಗಲೇ ಇರುವ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕೆಲಸಕ್ಕೆ ಚಿಕ್ಕೋಡಿಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇನ್ನಾದ್ರೂ ಸರ್ಕಾರ ಹೊಸ ಪ್ರಸ್ತಾವನೆಯನ್ನ ಸ್ವೀಕಾರ ಮಾಡಿ ಹೊಸ ಚಿಕಿತ್ಸಾಲಯಗಳನ್ನ ಪ್ರಾರಂಭಿಸುತ್ತಾ ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv