ಹಾಸನ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ತವರು ಜಿಲ್ಲೆಯಲ್ಲಿ ಸುಮಾರು 1650 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಕಡು ಬಡವರು, ಹಸಿದವರ ಪರ ತಮ್ಮೊಳಗಿನ ಕಾಳಜಿಯನ್ನು ಹೊರ ಹಾಕಿದ್ದರು. ವಿಪರ್ಯಾಸ ಅಂದ್ರೆ ಅದೇ ಬಡವರು, ಹಸಿದವರ ಹೊಟ್ಟೆ ತಣಿಸಬೇಕಿದ್ದ ಅನ್ನ ಹಾಸನದ ಜಿಲ್ಲಾ ಕ್ರೀಡಾಂಗಣದ ಬಳಿ ಎಲ್ಲೆಂದರಲ್ಲಿ ಚೆಲ್ಲಾಡುತ್ತಿದೆ.
Advertisement
ಭಾನುವಾರ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 81 ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಸಾವಿರಾರು ಮಂದಿಗೆ ಮೊಸರನ್ನ, ಬಿಸಿಬೇಳೆ ಬಾತ್, ಪಲಾವ್ ಮಾಡಿಸಲಾಗಿತ್ತು.
Advertisement
ಕಾರ್ಯಕ್ರಮ ಮುಗಿದ ಬಳಿಕ ಪ್ರೇಕ್ಷಕರು ಊಟ ಮಾಡಿದರಾದ್ರೂ, ಇನ್ನೂ ಸಾವಿರಕ್ಕೂ ಅಧಿಕ ಮಂದಿ ಊಟ ಮಾಡುವಷ್ಟು ಆಹಾರ ಹಾಗೇ ಉಳಿದಿತ್ತು. ಅದನ್ನು ಯಾವುದಾದ್ರು ಹಾಸ್ಟೆಲ್, ಅನಾಥಾಶ್ರಮ ಇಲ್ಲವೇ ಬೇರೆ ಯಾರಿಗಾದ್ರೂ ಕೊಡಬಹುದಾಗಿತ್ತು. ಆದ್ರೆ ಆಯೋಜಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಅಷ್ಟೂ ಅನ್ನ ಮಣ್ಣುಪಾಲಾಗಿದೆ. ಚರಂಡಿ, ಮೈದಾನದಲ್ಲಿ ಕ್ವಿಂಟಾಲ್ ಗಟ್ಟಲೆ ಅನ್ನ ಹಳಸಿ ನಾರುತ್ತಿದ್ದು, ಯಾರಿಗೂ ಬೇಡವಾಗಿದೆ.
Advertisement
Advertisement
ಆಹಾರ ಮಾತ್ರವಲ್ಲ ಟೊಮೆಟೋ, ಈರುಳ್ಳಿ ಸಹ ಮಣ್ಣು ಪಾಲಾಗಿದೆ. ಒಂದು ಕಡೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬಾಯಿ ಮಾತಲ್ಲಿ ಭಾಷಣ ಮಾಡುತ್ತಾರೆ. ಆದರೆ ಕ್ರೀಡಾಂಗಣದ ತುಂಬೆಲ್ಲ ಮೊಸರು, ಮಜ್ಜಿಗೆ, ನೀರಿನ ಪ್ಲಾಸ್ಟಿಕ್ ಪ್ಯಾಕೆಟ್ ರಾಶಿಯೇ ಬಿದ್ದಿದೆ. ಜವಾಬ್ದಾರಿ ಸ್ಥಾನದಲ್ಲಿರುವವರೇ ಹೀಗೆ ಮಾಡಿದ್ರೆ, ಸ್ವಚ್ಛತೆ ಹಾಗೂ ನಿಯಮ ಪಾಲನೆ ಮಾಡೋರು ಯಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಹಾಲು, ನೀರು, ಮೊಸರು ಪೂರೈಕೆ ಮಾಡಿದ ಹಾಸನ ಹಾಲು ಒಕ್ಕೂಟದವರು, ಬೆಳಗ್ಗೆ ಬಂದು ಚೆಲ್ಲಾಪಿಲ್ಲಿಯಾಗಿದ್ದ ಟ್ರೇಗಳನ್ನು ಜೋಡಿಸಿಕೊಂಡು ಹೋಗಿದ್ದಾರೆ. ಆದರೆ ಅವ್ಯವಸ್ಥೆಯ ಆಗರವಾಗಿರುವ ಕ್ರೀಡಾಂಗಣವನ್ನು ಸ್ವಚ್ಛ ಮಾಡುವವರು ಯಾರು ಎಂಬ ಪ್ರಶ್ನೆಗೆ ಸಂಬಂಧಪಟ್ಟವರೇ ಉತ್ತರ ನೀಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv