ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 6 ದಿನ ಕಳೆಯುತ್ತಾ ಬಂತು. ನೆಚ್ಚಿನ ಸ್ಟಾರ್ ಇಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 25 ಲಕ್ಷದವರೆಗೆ ಅಭಿಮಾನಿಗಳು ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ ಕಣ್ಣೀರಿಟ್ಟಿದ್ದರು. ಇದೀಗ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿ ಸಾಗರ ಹರಿದು ಬರ್ತಿದೆ.
ಮಂಗಳವಾರ ಸಂಜೆಯೇ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಇಂದು 9 ಗಂಟೆಯಿಂದ ದರ್ಶನಕ್ಕೆ ಬಿಡಲಾಗಿತ್ತು. ಆದರೆ ಓರ್ವ ಅಜ್ಜಿ ಬೆಳಗ್ಗೆ 5 ಗಂಟೆಗೇ ಬಂದು ಕಾದು ಕುಳಿತಿದ್ದರು. ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ಹಿರಿಯರು ಎಲ್ಲರೂ ಅಪ್ಪು ಸಮಾಧಿಗೆ ನಮಿಸಿ ಕಣ್ಣೀರು ಹಾಕಿದ್ರು. ಅದರಲ್ಲೂ ಮಹಿಳೆಯರಂತೂ ದುಃಖ ತಡೆಯದೆ ಗೋಳಾಡಿದರು.
ಎರಡು ದಿನ ಊಟ ಬಿಟ್ಟಿದ್ದೆ ಅಂತ ಸಂಕಟ ವ್ಯಕ್ತಪಡಿಸಿದ್ರು. ಮಕ್ಕಳೇ ಇರೋ ನಾಟ್ಯಲೋಕ ತಂಡ ಪುನೀತ್ ಸಮಾಧಿಯ ಎದುರು ಡ್ಯಾನ್ಸ್ ಮಾಡಿ ನಮನ ಸಲ್ಲಿಸಿತು. ಈ ಹಿಂದೆ ಈ ಮಕ್ಕಳ ನೃತ್ಯಕ್ಕೆ ಪುನೀತ್ ಭೇಷ್ ಅಂದಿದ್ದರು. ಧಾರಾವಾಹಿ ಕಲಾವಿದರು ಕೂಡ ಕಂಬನಿ ಮಿಡಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ
ಪಾವಗಡದ ಅಪ್ಪು ಅಭಿಮಾನಿ ದಯಾನಂದ್ ಅನ್ನೋರು ಎತ್ತಿನಗಾಡಿಯಲ್ಲೇ ಸಮಾಧಿ ದರ್ಶನಕ್ಕೆ ಬಂದಿದ್ರು. ಬಳಿಕ ಅಪ್ಪು ಮನೆಗೆ ಹೋಗಿ ಶಿವಣ್ಣ ಕಾಲಿಗೆ ಬಿದ್ದು ನಮಸ್ಕರಿಸಿ, ಅಪ್ಪುನಾ ನಿಮ್ಮಲ್ಲಿ ನೋಡ್ತೇವೆ ಅಂದ್ರು. ರಾಘಣ್ಣ ಕೂಡ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು. ಈ ಮಧ್ಯೆ ಅಪ್ಪು ಕಂಚಿನ ಪುತ್ಥಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!