ದಾವಣಗೆರೆ: ವರನಟ ಡಾ. ರಾಜ್ ಕುಮಾರ್ ಅವರ ಮೇಲಿರುವ ಅಪಾರವಾದ ಅಭಿಮಾನಕ್ಕೆ ಅಭಿಮಾನಿಯೊಬ್ಬ ಇಡೀ ದೇಹ ದಾನ ಮಾಡಿದ್ದಲ್ಲದೇ, ಕುಟುಂಬಸ್ಥರ ಅಂಗಾಗವನ್ನು ಕೂಡ ದಾನ ಮಾಡಿಸಿದ್ದಾರೆ.
ಪಕೀರಯ್ಯ ರಾಜ್‍ಕುಮಾರ್ ಕಟ್ಟಾ ಅಭಿಮಾನಿ. ಪಕೀರಯ್ಯ ಮೂಲತಃ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದ ನಿವಾಸಿಯಾಗಿದ್ದು, ಚಿಕ್ಕ ವಯಸ್ಸಿನಿಂದ ಡಾ. ರಾಜ್ ಕುಮಾರ್ ಅಭಿಮಾನಿಯಾಗಿದ್ದಾರೆ. ಬಡತನದಲ್ಲಿ ಹುಟ್ಟಿದ ಇವರು, ಕೂಲಿ ನಾಲಿ ಮಾಡಿಕೊಂಡು ಇದ್ದ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದರು. ಇದೀಗ ಕೆಲ ವರ್ಷಗಳಿಂದ ಶಾಲಾ ವಾಹನ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
ಅಣ್ಣಾವ್ರ ಪಕ್ಕ ಅಭಿಮಾನಿಯಾದ ಪಕೀರಯ್ಯ ಡಾ. ರಾಜ್ ಕುಮಾರ್ ಸಾವಿನ ನಂತರ ಮತ್ತೊಬ್ಬರಿಗೆ ತಮ್ಮ ಅಂಗಾಂಗಗಳು ಉಪಯೋಗವಾಗಲಿ ಎನ್ನುವ ನಿಟ್ಟಿನಲ್ಲಿ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದನ್ನೇ ಆದರ್ಶವನ್ನಾಗಿ ತೆಗೆದುಕೊಂಡ ಪಕೀರಯ್ಯ ಇಡೀ ದೇಹವನ್ನೇ ದಾನ ಮಾಡಿ ಮೆಡಿಕಲ್ ಕಾಲೇಜ್ ಗೆ ಬರೆದುಕೊಟ್ಟಿದ್ದಾರೆ. ಅಲ್ಲದೇ ಇಡೀ ಕುಟುಂಬದವರ ಅಂಗಾಂಗ ದಾನ ಮಾಡುವುದಾಗಿ ಬರೆಸಿಕೊಟ್ಟಿದ್ದಾರೆ. ಸತ್ತ ನಂತರ ದೇಹವನ್ನು ಮಣ್ಣಿನಲ್ಲಿ ಮುಚ್ಚಿದರೆ ಕೊಳೆಯುತ್ತದೆ, ಸುಟ್ಟರೆ ಬೂದಿಯಾಗುತ್ತದೆ ವಿನಃ ಯಾರಿಗೂ ಉಪಯೋಗವಾಗುವುದಿಲ್ಲ. ದೇಹವನ್ನು ದಾನ ಮಾಡಿದ್ರೆ ಸತ್ತ ನಂತರ ಹತ್ತಾರು ಜನರಿಗೆ ಉಪಯೋಗವಾಗುತ್ತದೆ. ಅಲ್ಲದೇ ಅಂಧರ ಬಾಳಿಗೆ ಬೆಳಕಾಗಬಹುದು. ಆಗ ನಮ್ಮ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪಕೀರಯ್ಯ ಹೇಳಿದ್ದಾರೆ.
ಕುಟುಂಬದಲ್ಲಿ ಪಕೀರಪ್ಪನ ಪತ್ನಿ ಹಾಗೂ ಇಬ್ಬರು ಮಕ್ಕಳು ಸಹ ಅಂಗಾಂಗ ದಾನ ಮಾಡಿದ್ದು, ಈ ಮೂಲಕ ಇತರರಿಗೆ ಆದರ್ಶವಾಗಿದ್ದಾರೆ. ನಾವು ಮಾತ್ರ ಬದುಕಿ ಬಾಳಿದರೆ ಸಾಲದು ನಾವು ಸತ್ತ ನಂತರ ಹತ್ತಾರೂ ಜನರ ಬಾಳಿಗೆ ಬೆಳಕಾದರೆ ಮಾತ್ರ ನನ್ನ ಜೀವನಕ್ಕೆ ಬೆಲೆ ಹಾಗೂ ಆತ್ಮಕ್ಕೆ ಶಾಂತಿ ಸಿಗುತ್ತೆ. ಅದನ್ನು ಬಿಟ್ಟು ಸ್ವಾರ್ಥತೆಯಿಂದ ಎಲ್ಲಾ ನನಗೆ ಬೇಕು ಎನ್ನುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಪಕೀರಯ್ಯ ಮಕ್ಕಳು ಹೇಳಿದ್ದಾರೆ. ಒಟ್ಟಿನಲ್ಲಿ ಪಕೀರಪ್ಪನ ಕುಟುಂಬಸ್ಥರು ತೆಗೆದುಕೊಂಡ ಈ ನಿರ್ಧಾರಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv