ಬೆಂಗಳೂರು: ಎರಡು ಬಾರಿಯ ಭೀಕರ ಪ್ರವಾಹಕ್ಕೆ ಕರ್ನಾಟಕ ತತ್ತರಿಸಿದೆ. ಸರ್ಕಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಲ್ಲ ಅಂತ ವಿಪಕ್ಷಗಳು ಆರೋಪ ಮಾಡುತ್ತಿವೆ. ನಿಜವಾಗಲೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದ್ಯಾ?, ಸರ್ಕಾರ ಸಂತ್ರಸ್ತರ ಕಣ್ಣೀರು ಒರೆಸೋ ಕೆಲಸ ಮಾಡಿದೆಯಾ ಎಂಬುದರ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ.
ಕರ್ನಾಟಕದಲ್ಲಿ ನೆರೆ ಪರಿಹಾರ ಕುರಿತು ಸರ್ಕಾರ-ವಿಪಕ್ಷಗಳ ನಡುವೆ ವಾರ್ ನಡೆಯುತ್ತಿದೆ. ನೆರೆ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರೋ ಆರೋಪಕ್ಕೆ ಸಿಎಂ ಯಡಿಯೂರಪ್ಪ ಅಂಕಿ-ಅಂಶ ಸಮೇತ ವಿವರಣೆ ನೀಡಿದ್ದಾರೆ. ಕೇಂದ್ರ 1,200 ಕೋಟಿ ಕೊಟ್ಟಿದ್ದರೆ, ರಾಜ್ಯದಿಂದ 2,969 ಕೋಟಿ ಬಿಡುಗಡೆ ಮಾಡಲಾಗಿದೆ. ಇದೂವರೆಗೆ ಪೂರ್ಣ ಹಾನಿಯಾದ 7,481 ಮನೆಗಳಿಗೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಮಾಹಿತಿ ಇಲ್ಲದೆ ಬೇಕಾಬಿಟ್ಟಿಯಾಗಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಅಂತ ಸಿಎಂ ಕಿಡಿಕಾರಿದ್ದಾರೆ.
Advertisement
Advertisement
ಯಡಿಯೂರಪ್ಪ ಆರೋಪಕ್ಕೆ ಪ್ರತ್ಯುತ್ತರ ನೀಡಿರೋ ಸಿದ್ದರಾಮಯ್ಯ, ಪರಿಹಾರ ಕೊಡಿ ಅಂದ್ರೆ ನಾನು ಸುಳ್ಳು ಹೇಳುತ್ತೇನೆ ಅಂತಾರೆ. ಸಂತ್ರಸ್ತರ ವಿಚಾರವಾಗಿ ನಾನು ಕೇಳದೇ ಮತ್ತಿನ್ಯಾರು ಕೇಳಬೇಕು ಮಿಸ್ಟರ್ ಯಡಿಯೂರಪ್ಪ ಅಂತ ಪ್ರಶ್ನಿಸಿದ್ದಾರೆ. ನೀವು ಕೊಟ್ಟಿರೋ ಪರಿಹಾರದ ಲೆಕ್ಕ ಕೊಡಿ ಅಂತ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ನಿಜಕ್ಕೂ ಸೂರು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆಯಾ ಎಂಬ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ. ಸಾಕಷ್ಟು ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆ. ಕೆಲವು ಸಂತ್ರಸ್ತರಿಗೆ ತಾಂತ್ರಿಕ ಕಾರಣದಿಂದ ಪರಿಹಾರ ವಿಳಂಬ ಆಗಿರೋದು ಬಯಲಾಗಿದೆ.
Advertisement
ಕೊಡಗಿನಲ್ಲೂ ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ. ಇಲ್ಲಿ ಪ್ರವಾಹ ಬಂದು 3 ತಿಂಗಳು ಕಳೆದರೂ ಸಂತ್ರಸ್ತರ ಕಣ್ಣೀರು ಮಾತ್ರ ನಿಂತಿಲ್ಲ. ಆರಂಭದಲ್ಲಿ ಬಾಡಿಗೆ ರೂಪದಲ್ಲಿ 10 ಸಾವಿರ ಕೊಟ್ಟಿದ್ದು ಬಿಟ್ಟರೆ ಇಂದಿಗೂ ಪುಡಿಗಾಸು ನೀಡಿಲ್ಲ. ಇತ್ತ ಮನೆಯೂ ಇಲ್ಲ, ದುಡಿಯೋಕೆ ಕೂಲಿನೂ ಇಲ್ಲ ಎನ್ನುವಂತಾಗಿದೆ ಎಂದು ಸಂತ್ರಸ್ತೆ ಯಮುನಾ ತನ್ನ ಅಳಲು ತೋಡಿಕೊಂಡರು.
ಉತ್ತರ ಕರ್ನಾಟಕದ ಕೆಲವೆಡೆ ಮಾತ್ರ ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆ. ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಬೀದಿಗೆ ಬಿದ್ದಿರುವ ಸಂತ್ರಸ್ತರ ನೆರವಿಗೆ ಸರ್ಕಾರ ಬರಬೇಕಿದೆ. ಕೇವಲ ತಾತ್ಕಾಲಿಕ ಪರಿಹಾರ ಮಾತ್ರ ನೀಡದೇ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡಬೇಕಿದೆ.