ವಿಜಯಪುರ: ಪ್ರವಾಹದಿಂದಾಗಿರುವ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಹೆಚ್ಚಿನ ಪ್ರಮಾಣದ ಪರಿಹಾರ ಧನ ಬರುವ ಕುರಿತು ನೂರಕ್ಕೆ ನೂರು ವಿಶ್ವಾಸವಿದೆ. ಕೇಂದ್ರದಿಂದ ಎಷ್ಟು ಹಣ ತರಬೇಕೋ ಅಷ್ಟುನ್ನು ನಾವು ತರುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.
ವಿಯಪುರದಲ್ಲಿ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹದ ವಿಚಾರದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ನೆರೆ ಸಮೀಕ್ಷೆಗೆ ಕೇಂದ್ರದಿಂದ ತಂಡ ಬರಲಿದೆ. ಹೆಚ್ಚಿನ ಪ್ರಮಾಣದ ಪರಿಹಾರ ಧನ ಸಿಗುವ ಕುರಿತು ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಎಲ್ಲ ತಹಶೀಲ್ದಾರರಿಗೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಹಣದ ಕೊರತೆ ಇಲ್ಲ. ಎಲ್ಲ ಶಾಸಕರು ಪಕ್ಷಾತೀತವಾಗಿ ಪ್ರವಾಹ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಸಮಾಧಾನದ ವಿಚಾರವಾಗಿದ್ದು, ಪ್ರವಾಹದ ಕುರಿತು ಆರಂಭದಲ್ಲಿ ರಾಜಕೀಯ ಶುರುವಾಗಿತ್ತು. ಇದೀಗ ಸಮೀಕ್ಷೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿದೆ. ಇಂತಹ ಪ್ರವಾಹ ಹಿಂದೆಂದೂ ಕಂಡಿಲ್ಲ. ರಾಜ್ಯದ ನನ್ನ ಅಣ್ಣ-ತಮ್ಮ, ಅಕ್ಕ-ತಂಗಿಯರಿಗೆ ತೊಂದರೆಯಾಗಿದೆ ಎನ್ನುವಂತೆ ಜನ ಸಹಾಯಕ್ಕೆ ಧಾವಿಸಿದ್ದಾರೆ. ಪ್ರತಿ ಸಂತ್ರಸ್ತರ ಖಾತೆಗೆ 10 ಸಾವಿರ ರೂ. ತಲುಪಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎಲ್ಲ ನೂತನ ಸಚಿವರು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಾರೆ. ಪ್ರವಾಹ ಪರಿಹಾರ ಕಾಮಗಾರಿಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಪರಿಹಾರ ಸಿಕ್ಕಿಲ್ಲದ್ದವರಿಗೆ ಪರಿಹಾರ ನೀಡಲಾಗುತ್ತದೆ. ಮಣ್ಣಿನ ಮನೆಗಳಿವೆ ಅಂತಹ ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಪ್ರವಾಹದಿಂದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ತಾತ್ಕಾಲಿಕ ಪರಿಹಾರದ ಜೊತೆಗೆ ಶಾಶ್ವತ ಪರಿಹಾರಕ್ಕೂ ಸರ್ಕಾರ ಮುಂದಾಗಲಿದೆ. ಸಚಿವರ ಓಡಾಟದಿಂದ ಸಂತ್ರಸ್ತರಲ್ಲಿ ಸಧ್ಯ ಧೈರ್ಯ ಬಂದಿದೆ ಎಂದು ತಿಳಿಸಿದರು.