ರಾಯಚೂರು/ಬಾಗಲಕೋಟೆ/ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಅದರಲ್ಲೂ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳು ಅಕ್ಷರಶಃ ಜಲಾವೃತಗೊಂಡು, ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾರಾಯಣಪುರ ಜಲಾಶಯದಿಂದ ದಿನದಿಂದ ದಿನಕ್ಕೆ ಹೆಚ್ಚು ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜೊತೆಗೆ ಲಿಂಗಸುಗೂರು ತಾಲೂಕಿನಲ್ಲಿ ಹಲವಾರು ಜಮೀನುಗಳಿಗೆ ನೀರು ನುಗ್ಗಿದ್ದು, ಈ ಭಾಗದ ಜನರು ಸುರಕ್ಷಿತ ಪ್ರದೇಶಗಳಿಗೆ ಬಂದಿದ್ದಾರೆ.
Advertisement
Advertisement
ಮಹಾರಾಷ್ಟ್ರದಲ್ಲಿಯ ಮಹಾಮಳೆಗೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಹುತೇಕ ಗ್ರಾಮಗಳು ನಡುಗಡ್ಡೆಗಳಾಗಿವೆ. ಚಿಕ್ಕಪಡಸಲಗಿ ಬ್ಯಾರೇಜ್‍ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಬ್ಯಾರೇಜ್ ಜಲಾವೃತವಾಗಲು ಕೇವಲ 2 ಮೀಟರ್ ಅಂತರ ಮಾತ್ರವಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇರುವುದರಿಂದ ಬ್ಯಾರೇಜ್ ಮೇಲಿನ ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಇದೆ.
Advertisement
Advertisement
ತೋಟ, ಜಾನುವಾರಿಗಳಿಗಾಗಿ ರೈತನ ಗೋಳಾಟ:
ಲಿಂಗಸುಗೂರು ತಾಲೂಕಿನಲ್ಲಿ ಜಲಾವೃತಗೊಂಡ ಭಾಗದ ಜನರೆಲ್ಲರೂ ತೋಟಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ಬಂದಿದ್ದರೆ, ಆದರೆ ತಾವದಗಡ್ಡೆ ರೈತ ಮೇಲಪ್ಪ ಮಾತ್ರ ದಾಳಿಂಬೆ ತೋಟವನ್ನ ಬಿಟ್ಟು ಬಂದಿರಲಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಸದ್ಯ ರೈತ ಮೇಲಪ್ಪ ಅವರು ತೋಟದ ಮನೆಯಲ್ಲಿರುವ ಹಸು, ಕುರಿ, ಆಡು, ಕೋಳಿ, ಎರಡು ನಾಯಿ, ಒಂದು ಬೈಕನ್ನು ನಡುಗಡ್ಡೆಯಿಂದ ಹೊರಗೆ ಸಾಗಿಸದಿದ್ದರೆ ಪುನಃ ಜಮೀನಿಗೆ ತೆರಳುವುದಾಗಿ ರೈತ ಹೇಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ರೈತನ ಜಾನುವಾರು ಹಾಗೂ ಸ್ವತ್ತನ್ನ ರಕ್ಷಣೆ ಮಾಡುವ ಕಾರ್ಯಕ್ಕೆ ಇದುವರೆಗೂ ಮುಂದಾಗಿಲ್ಲ.
ನೀರಿಲ್ಲದೆ ಬರಿದಾದ ಭೀಮಾತೀರ:
ಒಂದೆಡೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ನದಿಗಳಿಂದ ಹರಿದು ಬರುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳೋಕೆ ಡ್ಯಾಮ್‍ಗಳಿಂದ ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ನೀರು ಹರಿದು ಬರುತ್ತಿದೆ. ಆದರೆ, ಇಷ್ಟಲ್ಲ ಮಳೆಯ ನಡುವೆ ವಿಪರ್ಯಾಸ ಎನ್ನುವಂತೆ ಅದೇ ಉತ್ತರ ಕರ್ನಾಟಕದ ಕಲಬುರಗಿಯ ಭೀಮಾ ತೀರದಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಜಿಲ್ಲೆಯಲ್ಲಿ ಜನರಿಗೆ ಬಕೆಟ್ ಲೆಕ್ಕದಲ್ಲಿ ನೀರು ಮಾರಾಟವಾಗುತ್ತಿದೆ.