-ಪ್ರವಾಹ ಬಂದಾಗ ಬರದವರು, ಈಗ ಯಾಕ್ ಬಂದ್ರಿ?
ಬೆಳಗಾವಿ: ಮತ ಕೇಳಲು ಬಂದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮತ್ತು ಡಿಸಿಎಂ ಲಕ್ಷ್ಮಣ ಸವದಿಗೆ ಅಥಣಿ ತಾಲೂಕಿನ ನದಿ ಇಂಗಳಗಾಂವ್ ಗ್ರಾಮದ ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಅಪಾರ ಬೆಂಬಲಿಗರೊಂದಿಗೆ ಇಂಗಳಗಾಂವ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಮತಯಾಚನೆ ವೇಳೆ ಬಂದ ಸ್ಥಳೀಯ ಮಹಿಳೆಯರು, ಇರಲು ಮನೆ ಇಲ್ಲ. ಸತ್ತರೆ ಹೂಳಲು ಸ್ಮಶಾನವಿಲ್ಲ. ಪ್ರವಾಹ ಬಂದಾಗ ಕಷ್ಟ ಕೇಳಲು ನೀವು ಯಾರು ಬಂದಿಲ್ಲ. ಈಗ ಯಾಕೆ ನಮ್ಮೂರಿಗೆ ಬಂದಿದ್ದೀರಿ ಎಂದು ತರಾಟೆ ತೆಗೆದುಕೊಂಡು ಕಷ್ಟ ಹೇಳಿ ಕಣ್ಣೀರು ಹಾಕಿದರು.
Advertisement
Advertisement
ಸತತ ಮಳೆಯಿಂದಾಗಿ ಬೆಳೆ ಸಹ ಹಾಳಾಯ್ತು. ನಾವು ಹೇಗಿದ್ದೇವೆ, ನಮ್ಮ ಮನೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಬಂದು ನೋಡಿದ್ರೆ ನಿಮಗೆ ನಾವೆಲ್ಲ ಕಷ್ಟ ಗೊತ್ತಾಗುತ್ತದೆ. ಚುನಾವಣೆ ಬಂದಾಗ 15-20 ಜನರ ಗುಂಪು ಕಟ್ಟಿಕೊಂಡು ಬಂದರೆ ನಮ್ಮ ಸಮಸ್ಯೆ ಬಗೆಹರಿಯಲ್ಲ. ಪ್ರವಾಹದಿಂದಾಗಿ ಗ್ರಾಮವೇ ಸಂಪೂರ್ಣ ಜಲಾವೃತಗೊಂಡಿತ್ತು. ಬದುಕು ಇನ್ನು ಮೊದಲಿನ ಸ್ಥಿತಿಗೆ ಬಂದಿಲ್ಲ. ನಮಗೆ ಇರಲು ಸೂಕ್ತ ಜಾಗ ಕೊಡಿಸಿ ಎಂದು ಲಕ್ಷ್ಮಣ ಸವದಿ ಬಳಿ ನೆರೆ ಸಂತ್ರಸ್ತರು ಮನವಿ ಮಾಡಿಕೊಂಡರು.