ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರು ನಿರಂತರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲ್ಲೆಯಲ್ಲಿ ಅಂಕೋಲದ ಭಾವಿಕೇರಿ ಪಂಚಾಯ್ತಿ ವ್ಯಾಪ್ತಿ ಹಾಗೂ ಕೇಣಿಯಲ್ಲಿ ನಿಷೇಧಾಜ್ಞೆಯನ್ನು ಮಾ.15ರ ವರೆಗೂ ಮುಂದುವರಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ಆದೇಶಿಸಿದ್ದಾರೆ.
ಇದರ ಬೆನ್ನಲ್ಲೇ ನಾಳೆ ಮೀನುಗಾರರು ಸಮುದ್ರದಲ್ಲಿ ತಮ್ಮ ಬೋಟ್‌ಗಳೊಂದಿಗೆ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದು, ಸಮುದ್ರದಲ್ಲೇ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂಕೋಲದ ಕೇಣಿಯ ಕಡಲ ತೀರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸಮುದ್ರದ 500 ಮೀಟರ್ ಹೊರಗಿನ ಸಮುದ್ರದಲ್ಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಕೇಣಿಯಲ್ಲಿ ಪ್ರತಿಭಟನೆ ನಡೆಸಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಕೇಣಿ ಹೊರತುಪಡಿಸಿ ಬೇಲಿಕೇರಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ಈ ಹಿಂದೆ ಫೆ.23 ರಂದು ಕೇಣಿಯಲ್ಲಿ ಜೆ.ಎಸ್. ಡಬ್ಲ್ಯೂ ಖಾಸಗಿ ಕಂಪನಿಯ ಬಂದರು ನಿರ್ಮಾಣ ಸರ್ವೆ ಕಾರ್ಯಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಫೆ.23 ರಿಂದ ಮಾ.5 ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಹೇರಲಾಗಿತ್ತು. ಇದಲ್ಲದೇ ಮೀನುಗಾರರೊಂದಿಗೆ ನಡೆಸಿದ ಸಭೆಯೂ ವಿಫಲವಾಗಿದ್ದು, ಮತ್ತೆ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿಂದ ಮುಂಜಾಗ್ರತೆಯಾಗಿ ಮಾ.11 ರ ಬೆಳಗ್ಗೆ 6 ಗಂಟೆಯಿAದ ಮಾ.15 ರ ಸಂಜೆ 6 ಗಂಟೆ ವರೆಗೆ ಕಲಂ ಬಿ.ಎನ್.ಎಸ್ 163 ನಡಿ ನಿಷೇಧಾಜ್ಞೆ ಮುಂದುವರೆಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶಿಸಿದ್ದಾರೆ. ಅಲ್ಲದೇ, ಸಮುದ್ರ ಭಾಗದಲ್ಲೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.